ವಿಕಿಪೀಡಿಯಾವನ್ನು ಉಲ್ಲೇಖಿಸಿ ಎನ್‌ಐಎ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಬದಿಗಿರಿಸಿದ ಮದ್ರಾಸ್ ಹೈಕೋರ್ಟ್

Update: 2023-04-27 09:24 GMT

ಹೊಸದಿಲ್ಲಿ: ಮುಸ್ಲಿಂ ಧಾರ್ಮಿಕ ಪ್ರಚಾರಕರೊಬ್ಬರು ತಮ್ಮ ವಿರುದ್ಧ ಹೇರಲಾಗಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ನು ಕೈಬಿಡಬೇಕೆಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ವಿಕಿಪೀಡಿಯಾವನ್ನು ಉಲ್ಲೇಖಿಸಿದ್ದ ವಿಶೇಷ ಎನ್‌ಐಎ ನ್ಯಾಯಾಲಯದ  ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಇತ್ತೀಚಿನ ತನ್ನ ಆದೇಶವೊಂದರಲ್ಲಿ ಬದಿಗೆ ಸರಿಸಿದೆ.

ಕಾನೂನು ವ್ಯಾಜ್ಯಗಳನ್ನು ಪರಿಹರಿಸುವ ವೇಳೆ ವಿಕಿಪೀಡಿಯಾ ಉಲ್ಲೇಖದ ವಿರುದ್ಧ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿತ್ತು ಎಂದು ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ. ಸುಂದರ್‌ ಹಾಗೂ ಎಂ. ನಿರ್ಮಲ್‌ ಕುಮಾರ್‌ ಹೇಳಿದ್ದಾರೆ ಮತ್ತು ವಿಶೇಷ ಎನ್‌ಐಎ ನ್ಯಾಯಾಲಯ ಈ ಅಪೀಲನ್ನು ಹೊಸದಾಗಿ ಪರಿಗಣಿಸಬೇಕು ಹಾಗೂ ಸಾಕ್ಷಿಗಳ ಹೇಳಿಕೆಗಳು ಮತ್ತು ಸಾಕ್ಷ್ಯವನ್ನು ಆಧರಿಸಿ ತೀರ್ಪು ನೀಡಬೇಕು ಎಂದು  ಹೇಳಿದೆ.

ಝಿಯಾವುದ್ದೀನ್‌ ಬಾಖವಿ ಎಂಬ ಮುಸ್ಲಿಂ ಧರ್ಮ ಪ್ರಚಾರಕರನ್ನು  ʻಮೂಲಭೂತವಾದಿʼ ಇಸ್ಲಾಮಿಕ್‌ ಸಂಘಟನೆಯೊಂದರ ಫೇಸ್ಬುಕ್‌ ಪುಟವನ್ನು ಬ್ರೌಸ್‌ ಮಾಡಿ ಅದರ ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಮತ್ತು ಯುಎಪಿಎ ಅನ್ನು ಅವರ ಮೇಲೆ ಹೇರಲಾಗಿತ್ತು.

ಎನ್‌ಐಎ ನ್ಯಾಯಾಧೀಶರು ಸಾಕ್ಷ್ಯಗಳನ್ನು ಪರಿಗಣಿಸದೆ ಆ ನಿರ್ದಿಷ್ಟ ಸಂಘಟನೆಯ ವಿಕಿಪೀಡಿಯಾ ವ್ಯಾಖ್ಯಾನವನ್ನಷ್ಟೇ ಅವಲಂಬಿಸಿದ್ದರು ಎಂದು ಬಾಖವಿ ಅವರ ವಕೀಲರು ಹೈಕೋರ್ಟಿನಲ್ಲಿ ತಮ್ಮ ವಾದ ಮಂಡನೆ ವೇಳೆ ಹೇಳಿದ್ದರು.

ಇದನ್ನು ಒಪ್ಪಿದ ಹೈಕೋರ್ಟ್‌ ಪ್ರಕರಣದವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸೂಚಿಸಿದೆ.

Similar News