ರೋಡ್‌ ಶೋ ವೇಳೆ ಕಾರಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾರೆ ಎಂದು ಪ್ರಧಾನಿ ವಿರುದ್ಧ ದೂರು ನೀಡಿದ ತ್ರಿಶೂರ್‌ ನಿವಾಸಿ

Update: 2023-04-27 12:33 GMT

ಎರ್ಣಾಕುಳಂ: ಕೊಚ್ಚಿಯಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್‌ ಶೋಗೆ ಸಂಬಂಧಿಸಿದಂತೆ ತ್ರಿಶೂರ್‌ ನಿವಾಸಿಯೊಬ್ಬರು ಪ್ರಧಾನಿ ವಿರುದ್ಧ ದೂರು ದಾಖಲಿಸಿದ್ದಾರೆ.

ವಾಹನವೊಂದರ ತೆರೆದ ಬಾಗಿಲಿನಲ್ಲಿ ನೇತಾಡುವ ಮೂಲಕ ಪ್ರಧಾನಿ ಈ ರೋಡ್‌ ಶೋ ನಡೆಸಿದ್ದಾರೆಂದು ದೂರುದಾರ ಜಯಕೃಷ್ಣನ್‌ ಎಂಬವರು ಆರೋಪಿಸಿದ್ದಾರೆ. ಈ ಸಂದರ್ಭ ಕಾರಿನ ಗಾಜು ಹೂವುಗಳಿಂದ ಮುಚ್ಚಿ ಹೋಗಿದ್ದರಿಂದ ಚಾಲಕನ ವೀಕ್ಷಣೆಗೆ ಅಡ್ಡಿಯಾಗಿತ್ತು ಎಂದು ಹೇಳಿದ ದೂರುದಾರ ಎಲ್ಲರೂ ಕಾನೂನನ್ನು ಪಾಲಿಸುವಂತೆ ಮಾಡಬೇಕೆಂದು ಹೇಳಿದ್ದಾರೆ.

ದೂರನ್ನು ಡಿಜಿಪಿ ಹಾಗೂ ಮೋಟಾರ್‌ ವಾಹನ ಇಲಾಖೆಗೆ ಸಲ್ಲಿಸಲಾಗಿದೆ.

ಕೇರಳಕ್ಕೆ 2 ದಿನಗಳ ಭೇಟಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಸೋಮವಾರ ಸಂಜೆ ಕೇರಳದ ಸಾಂಪ್ರದಾಯಿಕ ಧಿರಿಸು ಧರಿಸಿ ರೋಡ್‌ ಶೋ ವೇಳೆ ರಸ್ತೆಯಲ್ಲಿ ಕೆಲ ಸಮಯ ನಡೆದು ಅಭಿಮಾನಿಗಳನ್ನು ಚಕಿತಗೊಳಿಸಿದ್ದರು.

ಹೀಗೆ ಸುಮಾರು 20 ನಿಮಿಷ ನಡೆದ ನಂತರ ಕಾರನ್ನು ಹತ್ತಿ ಫುಟ್‌ಬೋರ್ಡಿನಲ್ಲಿ ನಿಂತು ಹೆದ್ದಾರಿಯ ಇಕ್ಕೆಲಗಳು ಹಾಗೂ ಕಟ್ಟಡಗಳಲ್ಲಿ ನಿಂತು ನೋಡುತ್ತಿದ್ದ ಜನರತ್ತ ಕೈಬೀಸಿದ್ದರು.

Similar News