ಬೀದಿನಾಯಿಗಳ ದಾಳಿಗೆ 12 ವರ್ಷದ ಬಾಲಕ ಬಲಿ

Update: 2023-04-27 12:57 GMT

ಕಾನ್ಪುರ: ತಂದೆಯ ಹೊಡೆತದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿಹೋದ ಹನ್ನೆರಡು ವರ್ಷದ ಬಾಲಕ ಬೀದಿನಾಯಿಗಳ ದಾಳಿಗೆ ಮೃತಪಟ್ಟ ಘಟನೆ ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬುಧವಾರ ಮುಂಜಾನೆ ನಿರ್ಜನ ಪ್ರದೇಶದಲ್ಲಿ ಬಾಲಕನ ದೇಹ ಗಂಭೀರ ಗಾಯಗಳೊಂದಿಗೆ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಹಳೆ ಪೊಲೀಸ್ ಲೈನ್ ಕಾಲೋನಿಯಲ್ಲಿ ಕುಟುಂಬದ ಜತೆ ವಾಸವಿದ್ದ ಪ್ರಿನ್ಸ್ ಎಂದು ಗುರುತಿಸಲಾಗಿದೆ.

ಬಾಲಕನ ತಂದೆ ಓಂಕಾರ್ ಎಂಬಾತ, ಮಂಗಳವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದು ಪತ್ನಿ ಹಾಗೂ ಮಕ್ಕಳನ್ನು ಹೊಡೆಯಲು ಆರಂಭಿಸಿದ. ಇದಾದ ತಕ್ಷಣ ಪ್ರಿನ್ಸ್ ಭಯದಿಂದ ಮನೆಯಿಂದ ಓಡಿಹೋದ ಎಂದು ಮೂಲಗಳನ್ನು ಉಲ್ಲೇಖಿಸಿ timesofindia ವರದಿ ಮಾಡಿದೆ.

ಬಾಲಕ ಮನೆಗೆ ಮರಳದೇ ಇದ್ದಾಗ ತಾಯಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಬುಧವಾರ ಬೆಳಿಗ್ಗೆ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

Similar News