ಬಿಜೆಪಿ ಸಂಸದನ ವಿರುದ್ಧ ಧರಣಿ ನಡೆಸುತ್ತಿರುವ ಕುಸ್ತಿಪಟುಗಳಿಗೆ ನೀರಜ್‌ ಚೋಪ್ರಾ ಬೆಂಬಲ

Update: 2023-04-28 06:16 GMT

ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಕುಸ್ತಿಪಟುಗಳು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜಧಾನಿಯ ಜಂತರ್‌ ಮಂತರ್‌ನಲ್ಲಿ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಭಾರತದ ಜಾವೆಲಿನ್‌ ಎಸೆತದಲ್ಲಿ ಒಲಿಂಪಿಕ್‌ ಪದಕ ವಿಜೇತ ನೀರಜ್‌ ಚೋಪ್ರಾ ಆವರಿಂದ ಬೆಂಬಲ ದೊರಕಿದೆ. ಈ ಕುರಿತು ಟ್ವೀಟ್‌ ಮಾಡಿರುವ ನೀರಜ್‌, ಕುಸ್ತಿ ಪಟುಗಳ ಬೇಡಿಕೆ ಕುರಿತಂತೆ ಸಂಬಂಧಿತ ಪ್ರಾಧಿಕಾರಗಳು ತ್ವರಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ನಮ್ಮ ಅಥ್ಲೀಟುಗಳು ನ್ಯಾಯಕ್ಕಾಗಿ ಆಗ್ರಹಿಸಿ ರಸ್ತೆಗಿಳಿದಿರುವುದನ್ನು ನೋಡಿ ನನಗೆ ತುಂಬಾ ನೋವಾಗುತ್ತದೆ. ನಮ್ಮ ಮಹಾನ್‌ ದೇಶವನ್ನು ಪ್ರತಿನಿಧಿಸಲು ಹಾಗೂ ನಮಗೆಲ್ಲಾ ಹೆಮ್ಮೆಯುಂಟು ಮಾಡಲು ಅವರು ಬಹಳಷ್ಟು ಕಷ್ಟಪಟ್ಟಿದ್ದಾರೆ. ಒಂದು ದೇಶವಾಗಿ ಕ್ರೀಡಾಪಟು ಅಥವಾ ಬೇರೆ ಯಾರೇ ಆಗಲಿ, ಪ್ರತಿಯೊಬ್ಬ ವ್ಯಕ್ತಿಯ  ಘನತೆ, ಗೌರವವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈಗ ನಡೆಯುತ್ತಿರುವುದು ಯಾವತ್ತೂ ನಡೆಯಬಾರದು. ಇದೊಂದು ಸೂಕ್ಷ್ಮ ವಿಚಾರ ಮತ್ತು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಅದನ್ನು ನಿಭಾಯಿಸಬೇಕು. ನ್ಯಾಯ ದೊರಕುವಂತಾಗಲು ಸಂಬಂಧಿತ ಪ್ರಾಧಿಕಾರಗಳು ತ್ವರಿತ ಕ್ರಮಕೈಗೊಳ್ಳಬೇಕು,” ಎಂದು ನೀರಜ್‌ ಚೋಪ್ರಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Similar News