ಪ್ರತಿಭಟನಾ ಸ್ಥಳಕ್ಕೆ ಮೂಲ ಸೌಕರ್ಯ ಸರಬರಾಜಿಗೆ ಪೊಲೀಸರ ನಿರ್ಬಂಧ: ಕುಸ್ತಿಪಟುಗಳ ಆರೋಪ

Update: 2023-04-30 17:04 GMT

ಹೊಸದಿಲ್ಲಿ, ಎ. 29: ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್ ಹಾಗೂ ಪಡಿತರ ಸರಬರಾಜಿಗೆ ದಿಲ್ಲಿ ಪೊಲೀಸರು ತಡೆ ಒಡ್ಡುತ್ತಿದ್ದಾರೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಅವರು ಶುಕ್ರವಾರ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿಸಿದ್ದಾರೆ. ‘‘ಪ್ರತಿಭಟನಾ ಸ್ಥಳದಲ್ಲಿ ಅವರು (ಪೊಲೀಸರು) ವಿದ್ಯುತ್ ಕಡಿತಗೊಳಿಸಿದ್ದಾರೆ.

ತಡೆಗೋಡೆಗಳನ್ನು ಇರಿಸಿದ್ದಾರೆ. ಇದರಿಂದ ಆಹಾರದಂತಹ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಕಷ್ಟವಾಗುತ್ತಿದೆ. ಇದಲ್ಲದೆ, ಅವರು ಡಬ್ಲುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿರುವುದರಿಂದ ಪ್ರತಿಭಟನೆ ಹಿಂದೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ’’ ಎಂದು ಪುನಿಯಾ ಅವರು ತನ್ನ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ತಿಳಿಸಿದ್ದಾರೆ. ‘‘ಅವರು ಪ್ರತಿಭಟನಾ ಸ್ಥಳಕ್ಕೆ ಆಹಾರ ನೀರು, ಚಾಪೆಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತಿಲ್ಲ. ನಮ್ಮ ಒಗ್ಗಟ್ಟು ಮುರಿಯಲು ಪ್ರಯತ್ನಿಸುತ್ತಿದ್ದಾರೆ.

ಇದು ಸ್ಪರ್ಧೆ ಅಥವಾ ಭಾಗವಹಿಸುವಿಕೆ ವಿಚಾರ ಅಲ್ಲ. ಇದು ಲೈಂಗಿಕ ಕಿರುಕುಳದ ವಿಚಾರ. ಅವರು ಇದಕ್ಕೆ ಯಾಕೆ ಉತ್ತರ ನೀಡುತ್ತಿಲ್ಲ? ಬಾಲಕಿ ಏನು ಹೇಳಿಕೆ ಹಾಗೂ ದೂರು ನೀಡಿದ್ದಾರೆ ಎಂದು ತನಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ. ಅದು ಹೇಗೆ ಸಾಧ್ಯ? ಈಗಲೂ ನಮ್ಮಲ್ಲಿ ಪೊಲೀಸರು ಹಾಗೂ ಸಮಿತಿಗಳಲ್ಲಿ ನಂಬಿಕೆ ಇರಿಸುವಂತೆ ಹೇಳಲಾಗುತ್ತಿದೆ’’ ಎಂದು ಪುನಿಯಾ ಅವರು ಹೇಳಿದ್ದಾರೆ.

ಪುನಿಯಾ ಅವರು ಎತ್ತಿದ ಕಳವಳದ ಬಗ್ಗೆ ದಿಲ್ಲಿ ಪೊಲೀಸರು ಹಾಗೂ ಕ್ರೀಡಾ ಸಚಿವಾಲಯದಿಂದ ತತ್‍ಕ್ಷಣ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಮಗೆ ಮೂಲಭೂತ ಅಗತ್ಯತೆಗಳನ್ನು ಅವರು ನಿರಾಕರಿಸುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಹೆಚ್ಚು ಕಷ್ಟವಾಗುತ್ತಿದೆ ಎಂದು ಕುಸ್ತಿಪಟು ಸೋಮ್ವೀರ್ ಕಾದಿಯಾನ್ ಅವರು ಹೇಳಿದ್ದಾರೆ. ಈ ಪ್ರದೇಶದಲ್ಲಿ ಎರಡು ಸಾರ್ವಜನಿಕ ಶೌಚಾಲಯಗಳು ಇವೆ. ಆದರೆ, ಪಟೇಲ್ ಚೌಕ್ ಮೆಟ್ರೋ ಸ್ಟೇಷನ್ ಸಮೀಪ ಇರುವ ಒಂದು ಶೌಚಾಲಯಕ್ಕೆ ಪೊಲೀಸರು ತಡೆ ಗೋಡೆ ಅಡ್ಡ ಇರಿಸುತ್ತಾರೆ.

ಇನ್ನೊಂದು ಶೌಚಾಲಯಕ್ಕೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಬೀಗ ಹಾಕಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಪೊಲೀಸರು ಶನಿವಾರ ಎರಡು ಟ್ಯಾಂಕರ್ ಗಳಿಗೆ ಅನುಮತಿ ನೀಡಿದ್ದರು. ಆದರೆ, ಚಾಪೆಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿಲ್ಲ.

ಸಮೀಪದ ಪ್ರದೇಶದಿಂದ ಇತರ ಕುಸ್ತಿಪಟುಗಳ ನೆರವಿನಿಂದ ಬರುತ್ತಿದ್ದ ಮಧ್ಯಾಹ್ನದ ಊಟಕ್ಕೆ ಕೂಡ ನಿರ್ಬಂಧ ವಿಧಿಸಲಾಗಿದೆ ಎಂದು ಕಾದಿಯಾನ್ ಶನಿವಾರ ಹೇಳಿದ್ದಾರೆ. ನಾವು ಮಧ್ಯಾಹ್ನದ ಊಟಕ್ಕಾಗಿ ಗಲಾಟೆ ಮಾಡಿದ ಬಳಿಕ ಅಪರಾಹ್ನ 2,30ರ ಹೊತ್ತಿಗೆ ಊಟದ ಬಾಕ್ಸ್ ಗಳನ್ನು ಪಡೆಯಲು ಅವಕಾಶ ನೀಡಲಾಯಿತು. ನೀವು ಮೂಲಭೂತ ಸೌಕರ್ಯಗಳನ್ನು ತಡೆಯಬಹುದು, ಆದರೆ, ನಾವು ರೈತರ ಮಕ್ಕಳಾಗಿರುವುದರಿಂದ ಬದುಕಿಕೊಳ್ಳುತ್ತೇವೆ ಅವರು ಹೇಳಿದ್ದಾರೆ. 

Similar News