10 ಗಂಟೆಯ ಗಡುವು ಮುಗಿದಿದೆ ಎಂದು ಎ.ಆರ್. ರಹಮಾನ್‌ ಕಾರ್ಯಕ್ರಮ ನಿಲ್ಲಿಸಿದ ಪೊಲೀಸರು

Update: 2023-05-01 12:38 GMT

ಪುಣೆ: ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್‌. ರಹಮಾನ್‌ (AR Rahman) ಅವರ ಸಂಗೀತ ಕಾರ್ಯಕ್ರಮ ನಿಗದಿತ ಸಮಯವಾದ ರಾತ್ರಿ 10 ಗಂಟೆಯನ್ನು ದಾಟಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅದನ್ನು ನಿಲ್ಲಿಸಿದ ಘಟನೆ ನಡೆದಿದೆ.

ರವಿವಾರ  ಈ ಸಂಗೀತ ಕಾರ್ಯಕ್ರಮ ನಡೆದಿತ್ತು. ಪೊಲೀಸ್‌ ಅಧಿಕಾರಿಯೊಬ್ಬರು ವೇದಿಕೆ ಹತ್ತಿ ರಹಮಾನ್‌ ಮತ್ತಿತರ ಕಲಾವಿದರಿಗೆ ಕಾರ್ಯಕ್ರಮ ನಿಲ್ಲಿಸಲು ಹೇಳುತ್ತಿರುವ ವೀಡಿಯೋ ವೈರಲ್‌ ಆಗಿದೆ.

ಪುಣೆಯ ರಾಜಾ ಬಹಾದುರ್‌ ಮಿಲ್ಸ್‌ ಎಂಬಲ್ಲಿ ನಡೆದ ಈ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ನೆರೆದಿದ್ದರು.

“ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಯಬೇಕೆಂದು ಸೂಚಿಸಲಾಗಿತ್ತು. ಈ ಕಾರಣ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚಿಸಲಾಯಿತು, ಅವರು ಸೂಚನೆಯನ್ನು ಪಾಲಿಸಿ ಕಾರ್ಯಕ್ರಮ ನಿಲ್ಲಿಸಿದರು,” ಎಂದು ಸ್ಥಳೀಯ ಪೊಲೀಸ್‌ ಅಧಿಖಾರಿಗಳು ತಿಳಿಸಿದ್ದಾರೆ.

ವೀಡಿಯೋದಲ್ಲಿ ರಹಮಾನ್‌ ಅವರು ತಮ್ಮ ಕೈಗಡಿಯಾರ ತೋರಿಸಿ ವೇದಿಕೆಯಲ್ಲಿದ್ದ ಇತರ ಕಲಾವಿದರಿಗೆ ಪ್ರದರ್ಶನ ನಿಲ್ಲಿಸಲು ಸೂಚಿಸುವುದು ಕಾಣಿಸುತ್ತದೆ.

Similar News