ಪಠ್ಯಪುಸ್ತಕದಿಂದ ಭಾರತೀಯ ಕಿಸಾನ್ ಒಕ್ಕೂಟದ ಕುರಿತ ಅಧ್ಯಾಯ ತೆಗೆದು ಹಾಕಿದ ಎನ್‌ಸಿಇಆರ್‌ಟಿ: ವಿವಾದ

Update: 2023-05-02 16:11 GMT

ಹೊಸದಿಲ್ಲಿ, ಮೇ 2: ಎನ್‌ಸಿಇಆರ್‌ಟಿ ತನ್ನ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯ ಪುಸ್ತಕದಿಂದ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಭಾಗಿಯಾದ ಜನಪ್ರಿಯ ಚಳುವಳಿಗಳ ಕುರಿತ ಅಧ್ಯಾಯವನ್ನು ತೆಗೆದು ಹಾಕಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. 

‘ರೈಸ್ ಆಫ್ ಪಾಪ್ಯುಲರ್ ಮೂವ್‌ಮೆಂಟ್ಸ್’ ಶೀರ್ಷಿಕೆಯ ಅಧ್ಯಾಯದಲ್ಲಿ 1980ರ ಅಂತ್ಯದಲ್ಲಿ ಬಿಕೆಯು ಹುಟ್ಟಿಕೊಂಡಿರುವ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ, ಅದು ಹೊಸದಿಲ್ಲಿಯಲ್ಲಿ 1988ರಲ್ಲಿ ನಡೆಸಿದ ಶಿಸ್ತುಬದ್ಧ ಚಳುವಳಿ ಬಗ್ಗೆ ಚರ್ಚೆ ನಡೆಸಿದೆ. 

ಈ ಅಧ್ಯಾಯವನ್ನು ತೆಗೆದು ಹಾಕಿರುವುದನ್ನು ಬಿಕೆಯು ಟೀಕಿಸಿದೆ. ಈ ವಿಷಯದ ಕುರಿತಂತೆ ಕೇಂದ್ರ ಸರಕಾರವನ್ನು ಭೇಟಿಯಾಗಲು ಬಿಕೆಯು ಯೋಜಿಸುತ್ತಿದೆ. ತೆಗೆದು ಹಾಕಲಾದ ಒಂದು ಸಾಲು 1980ರ ರೈತರ ಚಳುವಳಿಯಲ್ಲಿ ಬಿಕೆಯು ಹೇಗೆ ಪ್ರಮುಖ ಪಾತ್ರವಹಿಸಿತ್ತು ಎಂಬ ಕುರಿತು ಮಾತನಾಡುತ್ತದೆ. 

ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ವರ್ಷದ ಕಾಲ ರೈತರು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಈ ಭಾಗವನ್ನು ಅಳಿಸಲಾಗಿದೆ ಎಂದು ಕೆಲವು ರಾಜಕೀಯ ತಜ್ಞರು ಸಂಶಯಿಸಿದ್ದಾರೆ. 

ಕಳೆದ ವರ್ಷ ಪಠ್ಯ ಪುಸ್ತಕಗಳನ್ನು ತರ್ಕಬದ್ಧಗೊಳಿಸುವ ಸಂದರ್ಭ ಈ ಅಂಶಗಳನ್ನು ತೆಗೆದು ಹಾಕಲಾಗಿದೆ ಎಂದು ಎನ್‌ಸಿಇಆರ್‌ಟಿ ಪ್ರತಿಪಾದಿಸಿದೆ. ಆದರೆ, ಈ ಶೈಕ್ಷಣಿಕ ಅವಧಿಯಲ್ಲಿ ಹೊಸ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. 

ಕೇಂದ್ರ ಸರಕಾರ ಭಾರತದ ಸಂಪೂರ್ಣ ಇತಿಹಾಸವನ್ನೇ ಬದಲಾಯಿಸುತ್ತಿದೆ ಎಂದು ಬಿಕೆಯು ವಕ್ತಾರ ರಾಕೇಶ್ ಟಿಕಾಯತ್ ಅವರು ಹೇಳಿದ್ದಾರೆ. ರೈತ ನಾಯಕ ರಾಕೇಶ್ ಟಿಕಾಯತ್ ಅವರ ತಂದೆ ಮಹೇಂದ್ರ ಸಿಂಗ್ ಟಿಕಾಯತ್ ಬಿಕೆಯು ಸಂಸ್ಥಾಪಕ.

Similar News