ಸಾಮಾಜಿಕ ಹೋರಾಟಗಾರರ ಜಾಮೀನು ವಿರುದ್ಧ ದಿಲ್ಲಿ ಪೊಲೀಸರು ಸಲ್ಲಿಸಿದ ಅರ್ಜಿ ಸುಪ್ರೀಂನಿಂದ ತಿರಸ್ಕೃತ

2020ರ ದಿಲ್ಲಿ ಗಲಭೆ

Update: 2023-05-02 18:06 GMT

ಹೊಸದಿಲ್ಲಿ, ಮೇ 2: 2020ರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ದೇವಾಂಗನ ಕಲಿತಾ, ನತಾಶಾ ನರ್ವಾಲಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿರುವುದರ ವಿರುದ್ಧ ದಿಲ್ಲಿ ಪೊಲೀಸರು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. 

ಸಾಮಾಜಿಕ ಹೋರಾಟಗಾರರು ಜಾಮೀನು ಪಡೆದು ಎರಡು ವರ್ಷಗಳಿಂದ ಹೊರಗಿದ್ದಾರೆ. ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯ 2021 ಜೂನ್‌ನಲ್ಲಿ ಅವರಿಗೆ ಜಾಮೀನು ನೀಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಗಲಭೆಗೆ ಸಂಬಂಧಿಸಿ ಅವರು ಯುಎಪಿಎ ಅಡಿ ಆರೋಪಿಗಳಾಗಿದ್ದಾರೆ ಎಂದು ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ನೇತೃತ್ವದ ಪೀಠ ಗಮನಿಸಿತು. 
ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಯುಎಪಿಎ ಅಡಿಯ ಭಯೋತ್ಪಾದಕ ಚಟುವಟಿಕೆ ಹಾಗೂ ಕಾನೂನಿನ ಪ್ರಕಾರ ವಿದ್ಯಾರ್ಥಿಗಳ ಹೋರಾಟದ ಹಕ್ಕಿನ ನಡುವಿನ ವ್ಯತ್ಯಾಸವನ್ನು ಗಮನಿಸದ ಪೊಲೀಸರರನ್ನು ತೀವ್ರವಾಗಿ ಟೀಕಿಸಿತ್ತು.

Similar News