ಶರದ್ ಪವಾರ್ ರಾಜೀನಾಮೆ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದ ಬಿಜೆಪಿ

Update: 2023-05-03 08:32 GMT

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ತಮ್ಮ ಹುದ್ದೆಯಿಂದ ಕೆಳಗಿಳಿಯುವ ಕುರಿತು ಪ್ರಕಟಿಸುತ್ತಿದ್ದಂತೆಯೇ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಮಂಗಳವಾರ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.

ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, "ಕಳೆದ ಹಲವಾರು ದಿನಗಳಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಕೊಂಚ ತಲ್ಲಣ ಸೃಷ್ಟಿಯಾಗಿದೆ. ಅಲ್ಲಿ ಕೆಲವು ಮಾತುಕತೆಗಳು ಜರುಗುತ್ತಿದ್ದು, ಅದರ ಫಲಿತಾಂಶವೇ ಶರದ್ ಪವಾರ್ ರಾಜೀನಾಮೆಯಾಗಿದೆ" ಎಂದಿದ್ದಾರೆ. ಎನ್‌ಸಿಪಿ ಉಳಿವು ತ್ರಿಶಂಕು ಸ್ಥಿತಿಯಲ್ಲಿದ್ದು, ಶರದ್ ಪವಾರ್ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ತಾನು ಎನ್‌ಸಿಪಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಶರದ್ ಪವಾರ್ ಪ್ರಕಟಿಸುವ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಮುಂಬೈನ ಯಶವಂತರಾವ್ ಚೌಹಾಣ್ ಪ್ರತಿಷ್ಠಾನದಲ್ಲಿ ತಮ್ಮ ಜೀವನ ಚರಿತ್ರೆ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, "ದೀರ್ಘಕಾಲದ ನಂತರ ಹಿಂದೆ ಸರಿಯುವುದು ಅವಶ್ಯಕವಾಗಿದೆ. ಪಕ್ಷಕ್ಕೆ ಹೊಸ ತಲೆಮಾರು ಮಾರ್ಗದರ್ಶನ ನೀಡುವ ಸಮಯ ಇದಾಗಿದೆ" ಎಂದು ಹೇಳಿದ್ದರು.

ಪಕ್ಷದ 60 ನಾಯಕರು ಭಾಗವಹಿಸಿದ್ದ ಆ ಕಾರ್ಯಕ್ರಮದಲ್ಲಿ, "ಇಷ್ಟು ಸುದೀರ್ಘ ಪಯಣದ ನಂತರ ವ್ಯಕ್ತಿಯೊಬ್ಬ ಒಂದು ಹಂತದಲ್ಲಿ ನಿಲ್ಲಲು ಯೋಚಿಸಬೇಕಾಗುತ್ತದೆ" ಎಂದು ಶರದ್ ಪವಾರ್ ಅಭಿಪ್ರಾಯ ಪಟ್ಟಿದ್ದರು.

ಆದರೆ, "ನಾನು ಅಧ್ಯಕ್ಷ ಪದವಿಯಿಂದ ಕೆಳಗಿಳಿಯುತ್ತಿದ್ದರೂ, ನಾನು ಸಾರ್ವಜನಿಕ ಜೀವನದಿಂದ ನಿವೃತ್ತನಾಗುತ್ತಿಲ್ಲ. ನಾನು ಸಾರ್ವಜನಿಕ ಸಭೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತೇನೆ" ಎಂದೂ ಶರದ್ ಪವಾರ್ ಸ್ಪಷ್ಟಪಡಿಸಿದ್ದರು.

ಈ ನಡುವೆ, ಶರದ್ ಪವಾರ್ ಪ್ರಕಟಣೆಯಿಂದ ಭಾವುಕರಾದ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯಾದ್ಯಂತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದೇ ವೇಳೆ ಶರದ್ ಪವಾರ್ ಅವರು ಇನ್ನೆರಡು ಮೂರು ದಿನಗಳಲ್ಲಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲಿದ್ದಾರೆ ಎಂದು ಅವರ ಸೋದರ ಸಂಬಂಧಿ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.

Similar News