ಪ್ರಾಸಿಕ್ಯೂಷನ್ ಸಾಕ್ಷ್ಯ ವಿರೋಧಾಭಾಸಗಳಿಂದ ಕೂಡಿತ್ತು: ವಿಶೇಷ ತನಿಖಾ ತಂಡದ ತನಿಖೆಗೆ ನ್ಯಾಯಾಲಯದ ಟೀಕೆ

2002ರ ನರೋಡಾ ಗಾಮ್ ಗಲಭೆ ಪ್ರಕರಣದ ತೀರ್ಪು ಬಹಿರಂಗ

Update: 2023-05-03 15:57 GMT

ಅಹ್ಮದಾಬಾದ್, ಮೇ 3: ನರೋಡಾ ಗಾಮ್ ಗಲಭೆ ಪ್ರಕರಣದ ಎಲ್ಲ 67 ಆರೋಪಿಗಳನ್ನು ಖುಲಾಸೆಗೊಳಿಸಿರುವ ಇಲ್ಲಿಯ ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿದ್ದ ವಿಶೇಷ ತನಿಖಾ ತಂಡ (ಸಿಟ್)ದ ತನಿಖಾ ವೈಖರಿಯನ್ನು ಕಟುವಾಗಿ ಟೀಕಿಸಿದೆ. ಪ್ರಾಸಿಕ್ಯೂಷನ್ ನ್ಯಾಯಾಲಯದಲ್ಲಿ ಮಂಡಿಸಿದ್ದ ಸಾಕ್ಷಗಳು ವಿರೋಧಾಭಾಸಗಳಿಂದ ಕೂಡಿದ್ದವು ಮತ್ತು ಅವುಗಳನ್ನು ನೆಚ್ಚಿಕೊಳ್ಳುವಂತಿರಲಿಲ್ಲ ಎಂದು ಅದು ಹೇಳಿದೆ.

ಗುಜರಾತ್ ಗಲಭೆಗಳ ಸಂದರ್ಭದಲ್ಲಿ 2002,ಫೆ.28ರಂದು ಅಹ್ಮದಾಬಾದ್ನ ಹೊರವಲಯದಲ್ಲಿರುವ ನರೋಡಾ ಗಾಮ್ನಲ್ಲಿ ದುಷ್ಕರ್ಮಿಗಳ ಗುಂಪು 11 ಜನರನ್ನು ಸಜೀವ ದಹನಗೊಳಿಸಿತ್ತು.

‌ವಿಶೇಷ ನ್ಯಾಯಾಧೀಶ ಎಸ್.ಕೆ.ಬಕ್ಷಿ ಅವರು ಎ.20ರಂದು ರಾಜ್ಯದ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾನಿ,ಮಾಜಿ ವಿಹಿಂಪ ನಾಯಕ ಜಯದೀಪ ಪಟೇಲ್ ಮತ್ತು ಮಾಜಿ ಬಜರಂಗ ದಳ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲ 67 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರು. ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಮಂಗಳವಾರ ಬಹಿರಂಗವಾಗಿ ಲಭ್ಯವಾಗಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಟ್ಗೆ ಹಸ್ತಾಂತರಿಸಿದಾಗ ತನಿಖಾಧಿಕಾರಿಯ ಹೊಣೆಗಾರಿಕೆಯು ವಿಶೇಷವಾಗಿತ್ತು ಮತ್ತು ಪ್ರಕರಣದಲ್ಲಿ ವಿಶೇಷ ತನಿಖೆಯನ್ನು ನಿರೀಕ್ಷಿಸಲಾಗಿತ್ತು ಎಂದು ತೀರ್ಪಿನಲ್ಲಿ ಅಭಿಪ್ರಾಯಿಸಿರುವ ನ್ಯಾಯಾಲಯವು,ಪ್ರಾಸಿಕ್ಯೂಷನ್ ಸಾದರಪಡಿಸಿದ್ದ ಕ್ರಿಮಿನಲ್ ಒಳಸಂಚಿನ ಕೋನವನ್ನು ತಿರಸ್ಕರಿಸಿದೆ. 2002,ಫೆ.28ರ ಘಟನೆಗೆ ಸಂಬಂಧಿಸಿದಂತೆ ಮಂಡಿಸಲಾಗಿದ್ದ ಸಾಕ್ಷಗಳು ಪ್ರಕರಣದಲ್ಲಿಯ ಆರೋಪಿಗಳು ಕ್ರಿಮಿನಲ್ ಒಳಸಂಚಿನ ಸಮಾನ ಉದ್ದೇಶದಿಂದ ಅಕ್ರಮ ಗುಂಪನ್ನು ರಚಿಸಿಕೊಂಡಿದ್ದರು ಎನ್ನುವುದನ್ನು ಸೂಚಿಸುವುದಿಲ್ಲ ಎಂದು ಅದು ಹೇಳಿದೆ.

ಘಟನೆ ನಡೆದು ಆರೂವರೆ ವರ್ಷಗಳ ಬಳಿಕ ಸಾಕ್ಷಿಗಳು ಕ್ರಿಮಿನಲ್ ಒಳಸಂಚಿನ ಹೇಳಿಕೆಯನ್ನು ನೀಡಿದ್ದರು ಮತ್ತು 2008ಕ್ಕೆ ಮೊದಲು ಗುಜರಾತ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದ್ದ ಇದನ್ನು ಪರಿಶೀಲಿಸಲು ಸಿಟ್ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ನ್ಯಾಯಾಲಯವು ಬೆಟ್ಟು ಮಾಡಿದೆ. ಸಿಟ್ 2008ರಲ್ಲಿ ಪ್ರಕರಣದ ತನಿಖೆಯನ್ನು ಗುಜರಾತ ಪೊಲೀಸರಿಂದ ಹಸ್ತಾಂತರಿಸಿಕೊಂಡಿತ್ತು.

ಅಪರಿಚಿತ ಗುಂಪಿನ ದಾಳಿಯಲ್ಲಿ ಆ ಪ್ರದೇಶದಲ್ಲಿಯ ಅಲ್ಪಸಂಖ್ಯಾತರ ಆಸ್ತಿಗಳು ಮತ್ತು ಜೀವಗಳಿಗೆ ಹಾನಿಯಾಗಿತ್ತು ಎನ್ನುವುದು ವಾಸ್ತವವಾಗಿದ್ದರೆ,ಆರೋಪಿಗಳು ಕ್ರಿಮಿನಲ್ ಒಳಸಂಚನ್ನು ರೂಪಿಸಿದ ಮತ್ತು ಅಕ್ರಮ ಗುಂಪನ್ನು ರಚಿಸಿಕೊಂಡ ಬಳಿಕ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದರು ಎಂಬ ತನ್ನ ಹೇಳಿಕೆಯನ್ನು ಸಾಬೀತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ನ್ಯಾಯಾಲಯವು ಕುಟುಕಿದೆ.

ಕೊಡ್ನಾನಿ,ಪಟೇಲ್ ಮತ್ತು ಬಜರಂಗಿ ಸೇರಿದಂತೆ ಬಿಡುಗಡೆಗೊಂಡ 21 ಆರೋಪಿಗಳು ಘಟನೆಯ ಸಮಯದಲ್ಲಿ ತಾವು ಸ್ಥಳದಲ್ಲಿರಲಿಲ್ಲ ಎನ್ನುವುದನ್ನು ಸಮರ್ಥಿಸಿಕೊಳ್ಳಲು ಒದಗಿಸಿದ್ದ ಪುರಾವೆಗಳನ್ನು ಒಪ್ಪಿಕೊಂಡಿರುವ ನ್ಯಾಯಾಲಯವು, ತನಿಖಾಧಿಕಾರಿಗಳು ಈ ಪುರಾವೆಗಳ ಬಗ್ಗೆ ತನಿಖೆಯನ್ನು ನಡೆಸಬೇಕಿತ್ತು,ಆದರೆ ಆ ಕೆಲಸವನ್ನು ಅವರು ಮಾಡಿರಲಿಲ್ಲ ಎಂದು ಹೇಳಿದೆ.

ಘಟನೆ ನಡೆದಾಗ ತಾನು ಗುಜರಾತ್ ವಿಧಾನಸಭೆಯಲ್ಲಿದ್ದೆ ಮತ್ತು ನಂತರ ಅಹ್ಮದಾಬಾದ್ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿದ್ದೆ,ನರೋಡಾ ಗಾಮ್ನಲ್ಲಿ ಇರಲಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಆಗಿನ ಬಿಜೆಪಿ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕರೆಸುವಂತೆ ಕೊಡ್ನಾನಿ ನ್ಯಾಯಾಲಯವನ್ನು ಕೋರಿಕೊಂಡಿದ್ದರು.

ಸಾಕ್ಷಿಗಳ ಹೇಳಿಕೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಮತ್ತು ವಿಶ್ವಾಸಾರ್ಹವಾಗಿಲ್ಲ. ‌

ಪ್ರಾಸಿಕ್ಯೂಷನ್ ಸಾದರಪಡಿಸಿದ್ದ ಪ್ರಮುಖ ಸಾಕ್ಷಿಗಳ ಹೇಳಿಕೆಗಳೂ ಇದೇ ಕಥೆಯಾಗಿದೆ ಹಾಗೂ ವಿರೋಧಾಭಾಸಗಳಿಂದ ಕೂಡಿವೆ. ಘಟನಾ ಸ್ಥಳದಲ್ಲಿ ಆರೋಪಿಗಳ ಉಪಸ್ಥಿತಿಯನ್ನು ಸಾಬೀತುಗೊಳಿಸುವಲ್ಲಿಯೂ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ತೀರ್ಪಿನಲ್ಲಿ ಹೇಳಿರುವ ನ್ಯಾಯಾಲಯವು,ಅಲ್ಲದೆ ಸಿಟ್ ನ್ಯಾಯಾಲಯದಲ್ಲಿ ಮಂಡಿಸಿದ್ದ ಆರೋಪಿಗಳ ಕರೆ ವಿವರಗಳೂ ಕ್ರಿಮಿನಲ್ ಒಳಸಂಚಿನ ಸಿದ್ಧಾಂತವನ್ನು ಬೆಂಬಲಿಸುವುದಿಲ್ಲ. ಪತ್ರಕರ್ತ ಆಶಿಷ್ ಖೇತಾನ್ ನಡೆಸಿದ್ದ ಕುಟುಕು ಕಾರ್ಯಾಚರಣೆಯೊಂದರ ಆಧಾರದಲ್ಲಿ ಬಾಬು ಬಜರಂಗಿ ವಿರುದ್ಧ ದಾಖಲಿಸಲಾಗಿರುವ ಅಪರಾಧಗಳು ಕೂಡ ವಿಶ್ವಾಸಾರ್ಹವಲ್ಲ ಎಂದು ತಿಳಿಸಿದೆ.

ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದು,ಈ ಪೈಕಿ 18 ಜನರು ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು. ಓರ್ವ ಆರೋಪಿಯನ್ನು ಸಾಕ್ಷಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಹಿಂದೆಯೇ ದೋಷಮುಕ್ತಗೊಳಿಸಿತ್ತು. ಉಳಿದ 67 ಆರೋಪಿಗಳು ಜಾಮೀನಿನಲ್ಲಿ ಹೊರಗಿದ್ದು,ಕಳೆದ ತಿಂಗಳು ಅವರನ್ನೂ ಖುಲಾಸೆಗೊಳಿಸಲಾಗಿದೆ.

Similar News