'ದಿ ಕೇರಳ ಸ್ಟೋರಿ' ವಿವಾದದ ನಡುವೆ ಕೇರಳದ ಮಸೀದಿಯೊಳಗೆ ನಡೆದ ಹಿಂದೂ ವಿವಾಹದ ವೀಡಿಯೋ ಶೇರ್‌ ಮಾಡಿದ ಎ ಆರ್‌ ರಹಮಾನ್‌

Update: 2023-05-04 13:28 GMT

ಚೆನ್ನೈ: ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ' ಕುರಿತಂತೆ ಎದ್ದಿರುವ ವಿವಾದದ ನಡುವೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್‌ ರಹಮಾನ್‌ ಅವರು ಕೇರಳದ ಮಸೀದಿಯೊಂದರೊಳಗೆ ನಡೆದ ಹಿಂದೂ ವಿವಾಹದ ವೀಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.

ಕೇರಳದಲ್ಲಿ 2020ರಲ್ಲಿ ಅಂಜು ಮತ್ತು ಶರತ್‌ ಅವರ ವಿವಾಹ ಹಿಂದು ಪದ್ಧತಿಯಂತೆ ಮಸೀದಿಯಲ್ಲಿ ಹಿಂದು ಅರ್ಚಕರ ಮಾರ್ಗದರ್ಶನದಲ್ಲಿ ನಡೆದಿತ್ತು.

ಮತೀಯ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದೊಂದಿಗೆ ರಹಮಾನ್‌ ಈ ವೀಡಿಯೋ ಶೇರ್‌ ಮಾಡಿ “ಮಾನವತೆಯ ಮೇಲಿನ ಪ್ರೀತಿಗೆ ಯಾವುದೇ ನಿರ್ಬಂಧಗಳಿರಬಾರದು,” ಎಂದು ಬರೆದಿದ್ದಾರೆ.

ಕೇರಳದಿಂದ ಅಂದಾಜು 32,000 ಮಹಿಳೆಯರು ಕಾಣೆಯಾಗಿದ್ದಾರೆ ಮತ್ತು ಇಸ್ಲಾಂಗೆ ಮತಾಂತರವಾಗಿ ಐಸಿಸ್‌ಗೆ ಸೇರಿದ್ದಾರೆಂಬುದನ್ನು ಸುದಿಪ್ತೊ ಸೇನ್‌ ನಿರ್ದೇಶನದ ದಿ ಕೇರಳ ಸ್ಟೋರಿ ಚಲನಚಿತ್ರದಲ್ಲಿ ಹೇಳಿರುವುದು ಕೇರಳದ ಆಡಳಿತ ಎಡರಂಗ ಹಾಗೂ ವಿಪಕ್ಷ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಂಖ್ಯೆಯನ್ನು ಉತ್ಪ್ರೇಕ್ಷಿಸಲಾಗಿದೆ ಹಾಗೂ ಚಿತ್ರ ವಾಸ್ತವವನ್ನು ಬಿಂಬಿಸಿಲ್ಲ ಎಂದು ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಆರೋಪಿಸಿವೆ.

ಮೇ 5ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರದ ಪ್ರದರ್ಶನಕ್ಕೆ ತಡೆ ಹೇರಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Similar News