ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಗೋಮೂತ್ರ, ಸಗಣಿ ಇದೆ ಎಂದ ವೀಡಿಯೋಗಳನ್ನು ನಿರ್ಬಂಧಿಸಲು ಗೂಗಲ್‌ಗೆ ಹೈಕೋರ್ಟ್‌ ಆದೇಶ

Update: 2023-05-05 12:58 GMT

ಹೊಸದಿಲ್ಲಿ: ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಗೋಮೂತ್ರ, ಸೆಗಣಿ ಇದೆ ಎಂದು  ಆರೋಪಿಸಿ ಕ್ಯಾಚ್‌ ಸಹಿತ ಪ್ರಮುಖ ಬ್ರ್ಯಾಂಡ್‌ಗಳನ್ನು ಟಾರ್ಗೆಟ್‌ ಮಾಡಿ ಯೂಟ್ಯೂಬ್‌ನಲ್ಲಿ ಕೆಲ ನಿಂದನಾತ್ಮಕ ವೀಡಿಯೋಗಳು ಮತ್ತೆ ಕಾಣಿಸಿಕೊಂಡರೆ ಅವುಗಳನ್ನು ನಿರ್ಬಂಧಿಸುವಂತೆ ಅಥವಾ ತೆಗೆದುಹಾಕುವಂತೆ ಗೂಗಲ್‌ ಸಂಸ್ಥೆಗೆ ದಿಲ್ಲಿ ಹೈಕೋರ್ಟ್‌ ಆದೇಶಿಸಿದೆ.

ಕ್ಯಾಚ್‌ ಬ್ರ್ಯಾಂಡ್‌ನ ದೂರುದಾರರ ಉತ್ಪನ್ನಗಳಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಈ ವೀಡಿಯೋಗಳನ್ನು ರಚಿಸಿ ಅಪ್‌ಲೋಡ್‌ ಮಾಡಲಾಗಿದೆ ಎಂಬುದು ಸ್ಪಷ್ಟ ಎಂದು  ದಿಲ್ಲಿ ಹೈಕೋರ್ಟ್‌ ಹೇಳಿದೆ.

ಈ ವೀಡಿಯೋಗಳನ್ನು ನೋಡಿದವರು ಅದರಲ್ಲಿರುವ ನಕಲಿ ಹೇಳಿಕೆಗಳನ್ನು ನಂಬುವಂತಾಗಿದೆ  ಮತ್ತು ದೂರುದಾರ (ಧರಂಪಾಲ್‌ ಸತ್ಯಪಾಲ್‌ ಸನ್ಸ್‌ ಪ್ರೈವೇಟ್‌ ಲಿ.) ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶವಿದೆ ಹಾಗೂ ಈ ವೀಡಿಯೋಗಳನ್ನು ಇನ್ನೂ ದೊಡ್ಡ ಸಂಖ್ಯೆಯ ಜನರು ನೋಡುವ ಸಾಧ್ಯತೆಯಿರುವುದರಿಂದ ಅವುಗಳನ್ನು ತೆಗೆದುಹಾಕಬೇಕೆಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ಸಂಜೀವ್‌ ನರುಲಾ ಹೇಳಿದರು.

ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ಸಂಬಂಧಿತ ಮೂರು ವೀಡಿಯೋಗಳನ್ನು ತೆಗೆದುಹಾಕಲಾಗಿದೆ ಎಂದು ವಿಚಾರಣೆ ವೇಳೆ ಉಪಸ್ಥಿತರಿದ್ದ ಗೂಗಲ್‌ ಪರ ವಕೀಲರು ಹೇಳಿದರು.

ಸಂಬಂಧಿತ ಸಂಸ್ಥೆ ದೂರು ನೀಡಿದಾಗಲೂ ಪ್ರತಿವಾದಿ ಚಾನಲ್‌ಗಳಾದ ಟಿವೈಆರ್‌ ಮತ್ತು ವೀವ್ಸ್‌ ಎನ್‌ನ್ಯೂಸ್‌ ವೀಡಿಯೋಗಳನ್ನು ತೆಗೆದುಹಾಕಿರಲಿಲ್ಲ ಎಂಬುದಕ್ಕೆ ನ್ಯಾಯಾಲಯ ಆಕ್ಷೇಪಿಸಿದೆ.

Similar News