ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಿ: ರಾಷ್ಟ್ರಪತಿಗೆ ಆರ್‌ಜೆಡಿ ಸಂಸದ ಮನೋಜ್ ಝಾ ಪತ್ರ

Update: 2023-05-05 16:08 GMT

ಹೊಸದಿಲ್ಲಿ, ಮೇ 5: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್‌ಜೆಡಿ ಸಂಸದ ಮನೋಜ್ ಝಾ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಬೇಕೆಂದು ಕೋರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಬುಡಕಟ್ಟು ಜನರು ಮತ್ತು ಬಹುಸಂಖ್ಯಾತ ಮೇಟಿ ಸಮುದಾಯದ ನಡುವೆ ಹೆಚ್ಚುತ್ತಿರುವ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರಕಾರ ‘ಕಂಡಲ್ಲಿ ಗುಂಡು’ ಆದೇಶ ಹೊರಡಿಸಿದ ಒಂದು ದಿನದ ಬಳಿಕ ಆರ್‌ಜೆಡಿಯ ರಾಜ್ಯಸಭಾ ಸದಸ್ಯ ಈ ಮನವಿ ಮಾಡಿದ್ದಾರೆ.

ಹಿಂಸಾಚಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 9,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ ಮತ್ತು ಅಸ್ಸಾಮ್ ರೈಫಲ್ಸ್‌ನ 55 ತುಕಡಿಗಳನ್ನು ನಿಯೋಜಿಸಲಾಗಿದೆ.

ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಝಾ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರವು ಅಪಾಯಕಾರಿ ಪ್ರಮಾಣದಲ್ಲಿ ಹಬ್ಬಿದೆ ಹಾಗೂ ಪ್ರಾಣ ಹಾನಿ ಮತ್ತು ಸೊತ್ತು ಹಾನಿಗೆ ಕಾರಣವಾಗಿದೆ ಎಂದರು.

‘‘ಮಣಿಪುರವು ಸಂಕೀರ್ಣ ಜನಾಂಗೀಯ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಹೊಂದಿದೆ. ಈ ವಲಯದಲ್ಲಿ ಹಲವು ಸಮುದಾಯಗಳು ವಾಸಿಸುತ್ತಿವೆ. ಬ್ರಿಟಿಶ್ ವಸಾಹತುಶಾಹಿ ಕಾಲದಲ್ಲಿ ಇಲ್ಲಿ ಜನಾಂಗೀಯ ಸಂಘರ್ಷಗಳು ಆರಂಭವಾಗಿವೆ. ಅದು ಈಗ ರಾಜ್ಯಕ್ಕೆ ಭಾರೀ ಸವಾಲಾಗಿ ಪರಿಣಮಿಸಿದೆ. ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆನ್ನುವ ಬೇಡಿಕೆ ವಿವಾದಾಸ್ಪದ ವಿಷಯವಾಗಿದೆ. ಮಣಿಪುರದ ಇತರ ಸಮುದಾಯಗಳು ಇದನ್ನು ವಿರೋಧಿಸುತ್ತಿವೆ. ಈ ವಿಷಯದಲ್ಲಿ ಹಿಂದೆಯೂ ಹಿಂಸಾಚಾರ ಮತ್ತು ಪ್ರತಿಭಟನೆಗಳು ನಡೆದಿವೆ. ಹಿಂಸಾಚಾರದಲ್ಲಿ ಆಗಿರುವ ಇತ್ತೀಚಿನ ಹೆಚ್ಚಳವು ತೀವ್ರ ಕಳವಳಕ್ಕೆ ಕಾರಣವಾಗಿದೆ’’ ಎಂದು ಆರ್‌ಜೆಡಿ ವಕ್ತಾರರೂ ಆಗಿರುವ ಮನೋಜ್ ಝಾ ಹೇಳಿದರು.

ರಾಜ್ಯ ಸರಕಾರದ ಪಕ್ಷಪಾತಿ ಧೋರಣೆಯಿಂದಾಗಿ ಇತ್ತೀಚೆಗೆ ಪರಿಸ್ಥಿತಿ ಬಿಗಡಾಯಿಸಿದೆ ಹಾಗೂ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರಪತಿ ಆಡಳಿತ ವಿಧಿಸುವುದು ಕೊನೆಯ ಅಸ್ತ್ರವಾಗಿದೆ ಎಂದು ಹೇಳಿದ ಅವರು, ಪ್ರಸಕ್ತ ಪರಿಸ್ಥಿತಿಯಲ್ಲಿ ಮಣಿಪುರದ ಜನರ ಪ್ರಾಣಗಳು ಮತ್ತು ಸೊತ್ತುಗಳನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ ಬುಧವಾರ ಸಂಘರ್ಷ ಸ್ಫೋಟಿಸಿತು ಮತ್ತು ಆ ದಿನ ರಾತ್ರಿ ಅದು ತೀವ್ರಗೊಂಡಿತು. ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಬೆಳವಣಿಗೆಗಳನ್ನು ಪ್ರತಿಭಟಿಸಿ ನಾಗಾ ಮತ್ತು ಕುಕಿ ಬುಡಕಟ್ಟು ಪಂಗಡಗಳು ‘ಬುಡಕಟ್ಟು ಏಕತಾ ಮೆರವಣಿಗೆ’ಯನ್ನು ಸಂಘಟಿಸಿದ್ದವು. ಅದಕ್ಕೆ ಪ್ರತಿಯಾಗಿ ಮೇಟಿ ಸಮುದಾಯವು ಪ್ರತಿಭಟನೆಗಳನ್ನು ನಡೆಸಿದೆ.

‘‘ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ’’ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ರಾಷ್ಟ್ರ ರಾಜಧಾನಿಯಲ್ಲೇ ಇರುವ ಅಮಿತ್ ಶಾ, ಮಣಿಪುರ ಸ್ಥಿತಿಯ ಬಗ್ಗೆ ಭದ್ರತಾ ಮತ್ತು ಬೇಹುಗಾರಿಕಾ ಸಂಸ್ಥೆಗಳಿಂದ ನಿಯಮಿತವಾಗಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಶುಕ್ರವಾರ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ಶಾಂತವಾಗಿದೆ ಎಂದಿದೆ.

ಗುರುವಾರ ಅಮಿತ್ ಶಾ ಎರಡು ವೀಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಿದರು. ಈ ಸಭೆಗಳಲ್ಲಿ ಮಣಿಪುರ ಮುಖ್ಯಮಂತ್ರಿ, ರಾಜ್ಯದ ಮುಖ್ಯಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಕೇಂದ್ರ ಸರಕಾರದ ಇತರ ಉನ್ನತ ಅಧಿಕಾರಿಗಳು ಭಾಗವಹಿಸಿದರು.

ಅವರು ಗುರುವಾರ ನಾಗಾಲ್ಯಾಂಡ್ ಮುಖ್ಯಮಂತ್ರಿ ನೇಫಿಯು ರಿಯೊ, ಮಿಝೊರಾಮ್ ಮುಖ್ಯಮಂತ್ರಿ ರೊರಮ್‌ತಂಗ ಮತ್ತು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರೊಂದಿಗೂ ಟೆಲಿಫೋನ್‌ನಲ್ಲಿ ಮಾತುಕತೆ ನಡೆಸಿದರು.

ಭದ್ರತಾ ಪಡೆಗಳ ನಿಯೋಜನೆ ಜವಾಬ್ದಾರಿ ಸಿಆರ್‌ಪಿಎಫ್ ಅಧಿಕಾರಿಗಳಿಗೆ:

ಈ ನಡುವೆ, ಹಿಂಸಾಗ್ರಸ್ತ ಮಣಿಪುರದಲ್ಲಿ ವಿವಿಧ ಭದ್ರತಾ ಪಡೆಗಳ ನಿಯೋಜನೆಯನ್ನು ಸಮನ್ವಯಗೊಳಿಸುವ ಕಾರ್ಯವನ್ನು ಸಿಆರ್‌ಪಿಎಫ್‌ನ ಐವರು ಡಿಐಜಿ ದರ್ಜೆಯ ಅಧಿಕಾರಿಗಳು ಹಾಗೂ ಏಳು ಸೀನಿಯರ್ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಎಸ್‌ಪಿ) ಮತ್ತು ಎಸ್‌ಪಿ ದರ್ಜೆಯ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅದೂ ಅಲ್ಲದೆ, ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಸೇರಿದಂತೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 20 ಹೊಸ ಕಂಪೆನಿಗಳನ್ನು ಹಿಂಸಾಗ್ರಸ್ತ ರಾಜ್ಯಕ್ಕೆ ರವಾನಿಸಲಾಗಿದೆ. ಸೇನಾ ತುಕಡಿಗಳು ಮತ್ತು ಅಸ್ಸಾಮ್ ರೈಫಲ್ಸ್ ಅಲ್ಲದೆ, ಸಿಎಪಿಎಫ್ ಕಂಪೆನಿಗಳ ನಿಯೋಜನೆಯು ಮುಂದುವರಿದಿದೆ ಎಂದು ಮೂಲ ತಿಳಿಸಿದೆ.

‘‘ಈ ಹಿರಿಯ ಅಧಿಕಾರಿಗಳ ಪೈಕಿ ಕೆಲವರನ್ನು ದಿಲ್ಲಿ ಮತ್ತು ರಾಂಚಿಯಿಂದ ಮಣಿಪುರಕ್ಕೆ ಕಳುಹಿಸಲಾಗುತ್ತಿದೆ’’ ಎಂದಿದೆ.

Similar News