ಡಬಲ್ ಇಂಜಿನ್ ಸರಕಾರದ ಹುಸಿ ಭರವಸೆ ಬಗ್ಗೆ ಎಚ್ಚರದಿಂದಿರಿ: ಕರ್ನಾಟಕ ಮತದಾರರಿಗೆ ಪಿ. ಚಿದಂಬರಂ ಎಚ್ಚರಿಕೆ

Update: 2023-05-06 06:22 GMT

ಹೊಸದಿಲ್ಲಿ: ಮಣಿಪುರದ ಹಿಂಸಾಚಾರವನ್ನು ಉಲ್ಲೇಖಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.  ಚಿದಂಬರಂ(P. Chidambaram) ಕರ್ನಾಟಕದ ಮತದಾರರು "ಡಬಲ್ ಇಂಜಿನ್ ಸರಕಾರದ ಹುಸಿ ಭರವಸೆ"ಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಶನಿವಾರ ಹೇಳಿದ್ದಾರೆ.

ಮಣಿಪುರದಲ್ಲಿ ಆದಿವಾಸಿಗಳ ಹಾಗೂ  ಬಹುಸಂಖ್ಯಾತ ಮೈತೆ ಸಮುದಾಯದ ನಡುವಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಹಳ್ಳಿಗಳಿಂದ 9,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ವ್ಯಾಪಕ ಹಿಂಸಾಚಾರ ತಡೆಯಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಐವತ್ತೈದು ಕಾಲಂಗಳನ್ನು ನಿಯೋಜಿಸಬೇಕಾಗಿತ್ತು.

"ಮಣಿಪುರದಲ್ಲಿ 'ಡಬಲ್ ಇಂಜಿನ್ ಸರಕಾರದ' ಪರಿಣಾಮಗಳನ್ನು ನೋಡಿ. ಅಲ್ಲಿ ಎರಡೂ  ಎಂಜಿನ್ ಗಳು ಕೆಟ್ಟುಹೋಗಿವೆ. ರಾಜ್ಯ ಸರಕಾರವು ಆಂತರಿಕ ಭಿನ್ನಾಭಿಪ್ರಾಯಗಳಿಂದ ಜರ್ಜರಿತವಾಗಿದೆ. ಕೇಂದ್ರ ಸರಳಾರವು ಎಲ್ಲಾ ಸಮಸ್ಯೆಗಳಿಗೆ ಪ್ರಚೋದನಕಾರಿ ಪರಿಹಾರವನ್ನು ಹೊಂದಿದೆ" ಎಂದು ಚಿದಂಬರಂ  ಟ್ವೀಟಿಸಿದ್ದಾರೆ

ಮಣಿಪುರದಲ್ಲಿ  ಮೈಟೀಸ್ ಮತ್ತು ಬುಡಕಟ್ಟು ಸಮುದಾಯಗಳ ನಡುವಿನ ಒಡಕು ಹೆಚ್ಚಿದೆ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಶಾಂತಿಯುತವಾಗಿ ಸಹಬಾಳ್ವೆಯ ಹಾದಿಯಲ್ಲಿದ್ದ ಸಮುದಾಯಗಳು ಈಗ ಯುದ್ಧದ ಹಾದಿಯಲ್ಲಿವೆ. ಕರ್ನಾಟಕದ ಮತದಾರರು ಡಬಲ್ ಇಂಜಿನ್ ಸರಕಾರದ ಹುಸಿ ಭರವಸೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು  ಮಾಜಿ ವಿತ್ತ ಸಚಿವ ಚಿದಂಬರಂ ಹೇಳಿದ್ದಾರೆ.

"ಡಬಲ್ ಇಂಜಿನ್" ಎಂಬುದು ಬಿಜೆಪಿ ನಾಯಕರು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವನ್ನು ಉಲ್ಲೇಖಿಸಲು ಸಾಮಾನ್ಯವಾಗಿ ಬಳಸುವ ಪದವಾಗಿದೆ.

Similar News