ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಬಂಧನಕ್ಕೆ ಮೇ 21 ಗಡುವು ನೀಡಿದ ಪ್ರತಿಭಟನಾಕಾರರ ಸಮಿತಿ

Update: 2023-05-08 05:03 GMT

ಹೊಸದಿಲ್ಲಿ: ಡಬ್ಲ್ಯುಎಫ್‌ಐ ಅಧ್ಯಕ್ಷ  ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಮೇ 21ರೊಳಗೆ ಬಂಧಿಸದಿದ್ದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವುದಾಗಿ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಸಲಹೆ ನೀಡುತ್ತಿರುವ 31 ಸದಸ್ಯರ ಸಮಿತಿ ರವಿವಾರ ಘೋಷಿಸಿದೆ.

ತಮ್ಮ ಪ್ರತಿಭಟನೆಯನ್ನು ರೈತರು ಹೈಜಾಕ್  ಮಾಡಿದ್ದಾರೆ ಎಂಬುದನ್ನು ಕುಸ್ತಿ ತಾರೆ ವಿನೇಶ್ ಫೋಗಟ್ ನಿರಾಕರಿಸಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್, ಖಾಪ್ ಮಹಮ್ 24 ಮುಖ್ಯಸ್ಥ ಮೆಹರ್ ಸಿಂಗ್ ಹಾಗೂ  ಸಂಕ್ಯುತ್ ಕಿಸ್ನಾ ಮೋರ್ಚಾದ (ರಾಜಕೀಯೇತರ) ಬಲದೇವ್ ಸಿಂಗ್ ಸಿರ್ಸಾ ಅವರು  ಕುಸ್ತಿಪಟುಗಳೊಂದಿಗೆ ಸೇರಿಕೊಂಡು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

"ಖಾಪ್ ಪಂಚಾಯತ್ ಹಾಗೂ  ಎಸ್‌ಕೆಎಂನ ಅನೇಕ ನಾಯಕರು ಇಂದು ಸಭೆಯಲ್ಲಿ ಭಾಗವಹಿಸಿದ್ದರು. ಪ್ರತಿ ಖಾಪ್‌ನ ಸದಸ್ಯರು ಪ್ರತಿದಿನ ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ನಾವು ನಿರ್ಧರಿಸಿದ್ದೇವೆ. ಅವರು ಹಗಲಿನಲ್ಲಿ ಇಲ್ಲಿಯೇ ಇದ್ದು ಸಂಜೆಯ ಹೊತ್ತಿಗೆ ಹಿಂತಿರುಗುತ್ತಾರೆ" ಎಂದು ಟಿಕಾಯತ್  ಬೃಹತ್ ಸಭೆಯ ಮೊದಲು ಹೇಳಿದರು.

"ಕುಸ್ತಿಪಟುಗಳ ಸಮಿತಿಯು ಪ್ರತಿಭಟನೆಯನ್ನು ನೋಡಿಕೊಳ್ಳುತ್ತದೆ ಮತ್ತು ನಾವು ಹೊರಗಿನಿಂದ ಕುಸ್ತಿಪಟುಗಳಿಗೆ ಬೆಂಬಲ ನೀಡುತ್ತೇವೆ. ನಾವು ಮೇ 21 ರಂದು ಸಭೆಯನ್ನು ನಿಗದಿಪಡಿಸಿದ್ದೇವೆ. ಸರಕಾರವು ನಿರ್ಣಯ ತೆಗೆದುಕೊಳ್ಳದಿದ್ದರೆ, ನಾವು ನಮ್ಮ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇವೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ, ಕುಸ್ತಿಪಟುಗಳಿಗೆ ಯಾವುದೇ ಸಮಸ್ಯೆ ಎದುರಾದರೆ ಇಡೀ ರಾಷ್ಟ್ರವೇ ಅವರ ಬೆನ್ನಿಗೆ ನಿಂತಿದೆ" ಎಂದು ಟಿಕಾಯತ್ ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಭಾರೀ ನಿಯೋಜನೆ ಮಾಡಲಾಗಿದ್ದು, ಅನೇಕ ಖಾಪ್ ನಾಯಕರು ಹಾಗೂ  ರೈತರು ನೊಂದ ಕುಸ್ತಿಪಟುಗಳೊಂದಿಗೆ ಸೇರಿಕೊಂಡಿದ್ದಾರೆ.

Similar News