ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ!

Update: 2023-05-09 04:02 GMT

ಹೊಸದಿಲ್ಲಿ: ಪ್ರತಿ ಕೆ.ಜಿ.ಗೆ 50 ರೂಪಾಯಿವರೆಗಿನ ದರದ ಸೇಬು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರ ಸೋಮವಾರ ನಿಷೇಧ ಹೇರಿದೆ. ಇದರಿಂದಾಗಿ ದೇಶಕ್ಕೆ ಅಧಿಕ ಪ್ರಮಾಣದಲ್ಲಿ ಈ ಹಣ್ಣು ರಫ್ತು ಮಾಡುತ್ತಿರುವ ಇರಾನ್, ಯುಎಇ ಹಾಗೂ ಅಫ್ಘಾನಿಸ್ತಾನಕ್ಕೆ ಹೊಡೆತ ಬೀಳಲಿದೆ.

ಈ ನಿಷೇಧ ಚೀನಾದ ಮೇಲೂ ಪರಿಣಾಮ ಬೀರಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ ಚೀನಾದಿಂದ ತೀರಾ ಕಡಿಮೆ ಪ್ರಮಾಣದ ಸೇಬು ಆಮದು ಆಗುತ್ತಿದೆ. ವಿದೇಶಿ ವ್ಯಾಪಾರಗಳ ಮಹಾನಿರ್ದೇಶಕರು ಈ ನಿರ್ಧಾರವನ್ನು ಪ್ರಕಟಿಸಿ, ಪ್ರತಿ ಕೆಜಿಗೆ 50 ರೂಪಾಯಿ ವರೆಗಿನ ಸೇಬುಹಣ್ಣು (ವೆಚ್ಚ, ವಿಮೆ ಹಾಗೂ ಸಾಗಾಣಿಕೆ ದರ ಸೇರಿ) ಆಮದನ್ನು ಮುಕ್ತ ವರ್ಗದಿಂದ ನಿಷೇಧಿತ ವರ್ಗಕ್ಕೆ ಸೇರಿಸಲಾಗಿದೆ. ಭೂತಾನ್‌ನಿಂದ ಆಮದಾಗುವ ಸೇಬಿಗೆ ಮಾತ್ರ ವಿನಾಯ್ತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸೇಬುಹಣ್ಣಿನ ಸೀಸನ್ ಕ್ಷೀಣವಾಗಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾಷಿಂಗ್ಟನ್ ಹಾಗೂ ಟರ್ಕಿ ಸೇಬುಹಣ್ಣ ವ್ಯಾಪಕವಾಗಿ ಆಮದಾಗುತ್ತಿತ್ತು. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 300 ದಶಲಕ್ಷ ಡಾಲರ್ ಮೌಲ್ಯದ ಸೇಬು ಆಮದಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 24ರಷ್ಟು ಕಡಿಮೆ.

ದೇಶಕ್ಕೆ ಟರ್ಕಿಯಿಂದ ಗರಿಷ್ಠ ಅಂದರೆ 72 ದಶಲಕ್ಷ ಡಾಲರ್ ಮೌಲ್ಯದ ಸೇಬುಹಣ್ಣು ಆಮದಾಗುತ್ತಿದೆ. ಚಿಲಿ (38.6 ದಶಲಕ್ಷ ಡಾಲರ್), ಇಟೆಲಿ (34), ಇರಾನ್ (26) ನಂತರದ ಸ್ಥಾನಗಳಲ್ಲಿವೆ. ಅಮೆರಿಕದಿಂದ ಆಮದಾಗುವ ಸೇಬಿನ ಪ್ರಮಾಣ ಶೇಕಡ 76ರಷ್ಟು ಇಳಿದು 50 ಲಕ್ಷ ಡಾಲರ್‌ಗೆ ಕುಸಿದಿದೆ.

Similar News