ಕರ್ನಾಟಕದ ಚುನಾವಣೆಯ ದಿನ ವೇತನ ಸಹಿತ ರಜೆ ಘೋಷಿಸಿದ ಗೋವಾ ಸರಕಾರ!

ಪ್ರತಿಪಕ್ಷಗಳು, ಉದ್ಯಮ ಸಂಸ್ಥೆಗಳಿಂದ ಟೀಕೆ

Update: 2023-05-09 05:24 GMT

ಪಣಜಿ: ನೆರೆಯ ಕರ್ನಾಟಕದಲ್ಲಿ ಬುಧವಾರ ನಡೆಯಲಿರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಗೋವಾದ ಬಿಜೆಪಿ ಸರಕಾರವು ಮೇ 10 ರಂದು ವೇತನ ಸಹಿತ ರಜೆ ಎಂದು ಘೋಷಿಸಿದೆ, ಇದು ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕಾ ಕಾರ್ಮಿಕರಿಗೂ ಅನ್ವಯಿಸುತ್ತದೆ.

ಆದಾಗ್ಯೂ, ಪ್ರಮೋದ್ ಸಾವಂತ್ ಸರಕಾರದ ಈ ನಿರ್ಧಾರವನ್ನು  ವಿರೋಧ ಪಕ್ಷಗಳು ಹಾಗೂ  ಉದ್ಯಮ ಸಂಸ್ಥೆಗಳು ಟೀಕಿಸಿವೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘವು ರಜೆಯ ವಿರುದ್ಧ ಕಾನೂನು ಆಶ್ರಯ ಪಡೆಯಬೇಕಾಗಬಹುದು ಎಂದು ಹೇಳಿದೆ.

ಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇ 10 ರಂದು ವೇತನ ಸಹಿತ ರಜೆ ಎಂದು ಘೋಷಿಸಿ  ಸರಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಸರಕಾರಿ ನೌಕರರು ಹಾಗೂ  ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ರಜೆಯನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ.

ಗೋವಾ ರಾಜ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ದಾಮೋದರ್ ಕೋಚ್ಕರ್ ರಾಜ್ಯ ಸರಕಾರದ "ಅಸಂಬದ್ಧ" ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದಾರೆ.

"ಗೋವಾದ ಕೈಗಾರಿಕೆಗಳು ಇದು ಸಂಪೂರ್ಣವಾಗಿ ಅಸಂಬದ್ಧ ಮತ್ತು ಮೂರ್ಖ ನಿರ್ಧಾರವೆಂದು ಭಾವಿಸುತ್ತದೆ... ಚುನಾವಣಾ ಲಾಭಕ್ಕಾಗಿ ಉದ್ಯಮಗಳನ್ನು ಸುಲಿಗೆ ಮಾಡುತ್ತಿದೆ" ಎಂದು  ಕೋಚ್ಕರ್ ಆರೋಪಿಸಿದರು ಮತ್ತು ರಾಜ್ಯ ಸರಕಾರದ ಇಂತಹ "ಏಕಪಕ್ಷೀಯ" ನಿರ್ಧಾರಗಳ ವಿರುದ್ಧ ಕಾನೂನು ಪರಿಹಾರಗಳನ್ನು ಪರಿಗಣಿಸುತ್ತಿದ್ದೇವೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್ ಕೂಡ ರಾಜ್ಯ ಸರಕಾರದ  "ಮೂರ್ಖ ನಿರ್ಧಾರ" ದ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ತಾಯಿ ಮಹದಾಯಿಯನ್ನು ಕರ್ನಾಟಕಕ್ಕೆ ಮಾರಾಟ ಮಾಡಿದ ನಂತರ, ಬಿಜೆಪಿ ನೇತೃತ್ವದ ಗೋವಾ ಸರಕಾರ ನೆರೆಹೊರೆಯವರನ್ನ ಮೆಚ್ಚಿಸಲು ಕೀಳು ಮಟ್ಟಕ್ಕೆ ಇಳಿಯುತ್ತಿದೆ ಎಂದು ಅವರು ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ.

ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಕೂಡ ರಾಜ್ಯ ಸರಕಾರದ  ನಡೆಯನ್ನು ಖಂಡಿಸಿದೆ.

Similar News