‘ದಿ ಕೇರಳ ಸ್ಟೋರಿ’: ಮೇ 15ರಂದು ವಿಚಾರಣಾ ದಿನಾಂಕ ನಿಗದಿಪಡಿಸಿದ ಸುಪ್ರೀಂಕೋರ್ಟ್

Update: 2023-05-09 15:39 GMT

ಹೊಸದಿಲ್ಲಿ, ಮೇ 9: ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯ ದಿನಾಂಕವನ್ನು ಮೇ 15ರಂದು ನಿಗದಿಪಡಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿದೆ.

ಅರ್ಜಿದಾರರ ಪರವಾಗಿ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಮೇಲ್ಮನವಿಯ ವಿಚಾರಣೆಗೆ ಬೇಗನೆ ದಿನಾಂಕವನ್ನು ನಿಗದಿಪಡಿಸುವಂತೆ ಕೋರಿದರು. ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳು ಸುಪ್ರೀಂ ಕೋರ್ಟ್ ನ ತುರ್ತು ಗಮನಕ್ಕೆ ಬರಬೇಕಾಗಿದೆ ಎಂದು ಅವರು ಹೇಳಿದರು.

‘‘ಇದು ‘ದ ಕೇರಳ ಸ್ಟೋರಿ’ ಚಿತ್ರಕ್ಕೆ ಸಂಬಂಧಿಸಿದೆ. ಇದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದೆ. ಇದು ತುರ್ತು ಗಮನ ಹರಿಸಬೇಕಾದ ವಿಷಯವಾಗಿದೆ’’ ಎಂದು ಸಿಬಲ್ ವಾದಿಸಿದರು. ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಲು ಮೇ 5ರಂದು ನಿರಾಕರಿಸಿದ ಹೈಕೋರ್ಟ್, ‘ಕಲಾ ಸ್ವಾತಂತ್ರ’ವನ್ನು ಗೌರವಿಸುವ ಮತ್ತು ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿತ್ತು.

ಚಿತ್ರದ ಟ್ರೇಲರನ್ನು ವೀಕ್ಷಿಸಿದ ಹೈಕೋರ್ಟ್, ಅದರಲ್ಲಿ ನಿರ್ದಿಷ್ಟ ಸಮುದಾಯವೊಂದಕ್ಕೆ ವಿರುದ್ಧವಾಗಿರುವ ಯಾವುದೇ ಅಂಶವಿಲ್ಲ ಎಂದು ಹೇಳಿತ್ತು. ‘‘ಈ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ’’ ಎನ್ನುವುದನ್ನು ಚಿತ್ರದಲ್ಲೇ ಸ್ಪಷ್ಟಪಡಿಸಲಾಗಿದೆ ಮತ್ತು ಅದರ ಸಾರ್ವಜನಿಕ ವೀಕ್ಷಣೆಗೆ ಕೇಂದ್ರೀಯ ಚಿತ್ರ ಪ್ರಮಾಣಪತ್ರ ಮಂಡಳಿ (ಸಿಬಿಎಫ್ಸಿ) ಈಗಾಗಲೇ ಅನುಮೋದನೆ ನೀಡಿದೆ ಎಂದು ಅದು ಹೇಳಿತ್ತು.

ಮೇ 4ರಂದು, ‘ದಿ ಕೇರಳ ಸ್ಟೋರಿ’ ವಿರುದ್ಧ ದಾಖಲಾಗಿದ್ದ ಹಲವು ಅರ್ಜಿಗಳನ್ನು ಎತ್ತಿಕೊಂಡ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ನಿರಾಕರಿಸಿತ್ತು. ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಕೋರುವ ಅರ್ಜಿಗಳೊಂದಿಗೆ ವ್ಯವಹರಿಸುವಾಗ ತಾನು ಅತ್ಯಂತ ಜಾಗರೂಕವಾಗಿರಬೇಕಾಗಿದೆ ಹಾಗೂ ಮನಸ್ಸಿಲ್ಲದಂತೆಯೂ ಇರಬೇಕಾಗಿದೆ ಎಂದು ಹೇಳಿತ್ತು.

ಅಂತಿಮವಾಗಿ, ಚಿತ್ರವೊಂದರ ಮೌಲ್ಯವನ್ನು ಜನರು ನಿರ್ಧರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ‘‘ನಿರ್ಮಾಪಕರು ಈ ಚಿತ್ರಕ್ಕೆ ಹಾಕಿರುವ ಹಣ ಮತ್ತು ನಟರು ಹಾಕಿರುವ ಶ್ರಮವನ್ನು ಪರಿಗಣಿಸುವಂತೆ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅರ್ಜಿದಾರರಿಗೆ ಸೂಚಿಸಿತ್ತು.

ಚಿತ್ರವು ಇಡೀ ಮುಸ್ಲಿಮ್ ಸಮುದಾಯವನ್ನು, ಅದರಲ್ಲೂ ಮುಖ್ಯವಾಗಿ ಮುಸ್ಲಿಮ್ ಯುವಕರನ್ನು ಕೆಟ್ಟದಾಗಿ ಬಿಂಬಿಸಿದೆ ಎಂಬುದಾಗಿ ಅರ್ಜಿಗಳಲ್ಲಿ ವಾದಿಸಲಾಗಿದೆ. ಕೇರಳದಲ್ಲಿ 32,000 ಹುಡುಗಿಯರನ್ನು ‘ಲವ್ ಜಿಹಾದ್’ ಮೂಲಕ ಆಕರ್ಷಿಸಿ ಅವರನ್ನು ಪಶ್ಚಿಮ ಏಶ್ಯಕ್ಕೆ ಕಳುಹಿಸಿ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿಸಲಾಗಿದೆ ಎಂಬ ‘‘ಅಪಪ್ರಚಾರ’’ವನ್ನು ಈ ಚಿತ್ರದ ಮೂಲಕ ನಡೆಸಲಾಗುತ್ತಿದೆ ಎಂಬುದಾಗಿ ಅರ್ಜಿಗಳು ಆರೋಪಿಸಿವೆ.

Similar News