​'ನಡೆಯುವ ಹಕ್ಕು' ಜಾರಿಗೊಳಿಸಿದ ಮೊದಲ ರಾಜ್ಯ ಇದು..

Update: 2023-05-10 02:16 GMT

ಹೊಸದಿಲ್ಲಿ: ಪಾದಚಾರಿಗಳು ಹಾಗೂ ಸೈಕ್ಲಿಸ್ಟ್‍ಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ 'ನಡೆಯುವ ಹಕ್ಕು' ಜಾರಿಗೊಳಿಸಿದೆ. ಇದರ ಅನ್ವಯ ಭವಿಷ್ಯದ ಎಲ್ಲ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಹಾಗೂ ಹೊಸ ರಸ್ತೆ ನಿರ್ಮಾಣದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ) ಸೇರಿದಂತೆ ಎಲ್ಲ ರಸ್ತೆ ಮಾಲೀಕತ್ವ ಹೊಂದಿರುವ ಏಜೆನ್ಸಿಗಳು ಫುಟ್‍ಪಾತ್ ಹಾಗೂ ಸೈಕಲ್ ಟ್ರ್ಯಾಕ್‍ಗಳ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ಸೂಚನೆ ನೀಡಿದೆ.

ಪಂಜಾಬ್ ಮುಖ್ಯ ಕಾರ್ಯದರ್ಶಿ ವಿಜಯ ಕುಮಾರ್ ಜಂಜೂವಾ ಅವರು ಪಂಜಾಬ್ ಸರ್ಕಾರದ ಸಂಚಾರ ಸಲಹೆಗಾರ ನವದೀಪ್ ಅಸೀಜಾ ಅವರಿಗೆ ನೀಡಿರುವ ಸೂಚನೆಯ ಪ್ರಕಾರ, "ಹಾಲಿ ರಸ್ತೆಗಳ ಭವಿಷ್ಯದ ಎಲ್ಲ ರಸ್ತೆ ವಿಸ್ತರಣೆಯಲ್ಲಿ ಮತ್ತು ಹೊಸದಾಗಿ ನಿರ್ಮಿಸಲಾಗುವ ರಸ್ತೆಗಳಲ್ಲಿ, ಎಲ್ಲ ರಸ್ತೆ ಒಡೆತನದ ಇಲಾಖೆಗಳು ಸೈಕಲ್ ಟ್ರ್ಯಾಖ್‍ಗಳನ್ನು ಮತ್ತು ಫುಟ್‍ಪಾತ್‍ಗಳನ್ನು ನಿರ್ಮಿಸುವುದು ಕಡ್ಡಾಯ" ಲೋಕೋಪಯೋಗಿ ಇಲಾಖೆ, ಸ್ಥಳೀಯ ಸಂಸ್ಥೆಗಳು, ಎನ್‍ಎಚ್‍ಎಐ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ ಈಗಾಗಲೇ ಈ ಸಂಬಂಧ ಪತ್ರ ಬರೆಯಲಾಗಿದೆ. 

ಫುಟ್‍ಪಾತ್ ಹಾಗೂ ಸೈಕಲ್ ಟ್ರ್ಯಾಖ್‍ಗಳ ನಿರ್ಮಾಣಕ್ಕೆ ಹಣಕಾಸು ಅನುದಾನ ಸೇರಿದಂತೆ ಕಾಲಮಿತಿಯಲ್ಲಿ ಇದನ್ನು ಜಾರಿಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ ಆದೇಶ ನೀಡಲಾಗಿದೆ.

Similar News