ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ಬರ್ಗ್ ಆರೋಪ: ಸುಪ್ರೀಂ ಕೋರ್ಟ್ ನಿಂದ ನೇಮಕಗೊಂಡಿದ್ದ ಸಮಿತಿಯಿಂದ ವರದಿ ಸಲ್ಲಿಕೆ

Update: 2023-05-10 11:27 GMT

ಹೊಸದಿಲ್ಲಿ: ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದಿಂದ ನೇಮಕಗೊಂಡಿದ್ದ ತಜ್ಞರ ಸಮಿತಿಯು ಮೇ 8ರಂದು ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮೇ 12ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಪೀಠವು ವಿಷಯದ ವಿಚಾರಣೆಯನ್ನು ನಡೆಸಲಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸಮಿತಿಯು ಸರ್ವೋಚ್ಚ ನ್ಯಾಯಾಲಯವು ತನ್ನ ಮಾ.2ರ ಆದೇಶದಲ್ಲಿ ಸೂಚಿಸಿದ್ದ ಎಲ್ಲ ವಿಷಯಗಳ ಕುರಿತು ತನ್ನ ತನಿಖೆಯನ್ನು ಪೂರ್ಣಗೊಳಿಸಿದೆಯೇ ಅಥವಾ ಅದಕ್ಕಾಗಿ ಹೆಚ್ಚಿನ ಕಾಲಾವಕಾಶವನ್ನು ಕೋರಿದೆಯೇ ಎನ್ನುವುದು ತಿಳಿದು ಬಂದಿಲ್ಲ.

ಕೇಂದ್ರ ಸರಕಾರವು ಸಮಿತಿಯ ಸದಸ್ಯರನ್ನಾಗಿ ಸೂಚಿಸಿದ್ದ ಹೆಸರುಗಳನ್ನು ಫೆ.17ರಂದು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು,ತನ್ನದೇ ಆದ ತಜ್ಞರ ಸಮಿತಿಯ ರಚನೆಯನ್ನು ಪ್ರಕಟಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎ.ಎಂ.ಸಪ್ರೆ ನೇತೃತ್ವದ ಸಮಿತಿಯು ಮಾಜಿ ಬ್ಯಾಂಕರ್ ಗಳಾದ ಕೆ.ವಿ.ಕಾಮತ್ ಮತ್ತು ಒ.ಪಿ.ಭಟ್ಟ,ಇನ್ಫೋಸಿಸ್ ಸಹಸ್ಥಾಪಕ ನಂದನ್ ನಿಲೇಕಣಿ,ಸೆಕ್ಯೂರಿಟಿಸ್ ಲಾಯರ್ ಸೋಮಶೇಖರ ಸುಂದರೇಶನ್ ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಜೆ.ಪಿ.ದೇವಧರ ಅವರನ್ನು ಒಳಗೊಂಡಿದೆ.

ಎ.2 ಮತ್ತು ಎ.26ರಂದು ಸೆಬಿ ಅಧ್ಯಕ್ಷರು ವಿಷಯದ ಕುರಿತು ಮಾಹಿತಿಗಳನ್ನು ಸಮಿತಿಗೆ ಸಲ್ಲಿಸಿದ್ದರು.

ಎರಡು ತಿಂಗಳುಗಳಲ್ಲಿ ತಮ್ಮ ತನಿಖೆಗಳನ್ನು ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೆಬಿ ಮತ್ತು ತಜ್ಞರ ಸಮಿತಿಗೆ ಸೂಚಿಸಿತ್ತು. ಎ.29ರಂದು ಸೆಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳುಗಳ ಕಾಲಾವಕಾಶವನ್ನು ಕೋರಿತ್ತು.

Similar News