ಸುಪ್ರೀಂ ಕೋರ್ಟಿನ ಕಟ್ಟುನಿಟ್ಟಿನ ಸೂಚನೆಯ ನಂತರವೂ ಮಹಾರಾಷ್ಟ್ರದ 3 ಕಾರ್ಯಕ್ರಮಗಳಲ್ಲಿ ಕೇಳಿ ಬಂದ ದ್ವೇಷ ಭಾಷಣ

Update: 2023-05-10 12:23 GMT

ಹೊಸದಿಲ್ಲಿ: ದ್ವೇಷದ ಮಾತುಗಳ ಪ್ರಕರಣಗಳಲಿ ದೂರುಗಳು ದಾಖಲಾಗುವುದಕ್ಕೆ ಕಾಯದೆ  ಪ್ರಕರಣ ದಾಖಲಿಸಬೇಕು ಹಾಗೂ ದ್ವೇಷದ ಭಾಷಣ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳದೇ ಇರುವುದು ನ್ಯಾಯಾಂಗ ನಿಂದನೆಗೆ ಸಮನಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದ ನಂತರದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಕನಿಷ್ಠ ಮೂರು ಕಾರ್ಯಕ್ರಮಗಳಲ್ಲಿ ದ್ವೇಷದ ಭಾಷಣಗಳನ್ನು ನೀಡಲಾಗಿದೆ.  ಒಂದು ಕಾರ್ಯಕ್ರಮದಲ್ಲಿ ಸಿಎಂ ಏಕನಾಥ್‌ ಶಿಂಧೆ ಪುತ್ರ ಸಂಸದ ಶ್ರೀಕಾಂತ್‌ ಶಿಂಧೆ ಭಾಗವಹಿಸಿದ್ದರು ಎಂದು newslaundry.com ವರದಿ ಮಾಡಿದೆ. 

ನಾಗ್ಪುರ್‌ನಲ್ಲಿ ಎಪ್ರಿಲ್‌ 30ರಂದು ನಡೆದ ಕಾರ್ಯಕ್ರಮದಲ್ಲಿ ಬಜರಂಗದಳ ಕಾರ್ಯಕರ್ತರು ತ್ರಿಶೂಲಗಳನ್ನು ವಿತರಿಸಿದ್ದಾರೆ. ಅದೇ ದಿನ ಜಲಗಾಂವ್‌ನಲ್ಲಿ ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದ್ವೇಷದ ಭಾಷಣ ನೀಡಲಾಗಿದ್ದರೆ, ಥಾಣೆಯಲ್ಲಿ ಸಕಲ್‌ ಹಿಂದು ಸಮಾಜ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಶಸ್ತ್ರಗಳನ್ನು ಹೊಂದಲು ಕರೆ ನೀಡಲಾಗಿತ್ತು.

ಜಲಗಾಂವ್‌ ಎಸ್‌ಪಿ ಎಂ ರಾಜಕುಮಾರ್‌ ಪ್ರತಿಕ್ರಿಯಿಸಿ, ಘಟನೆಯ ರೆಕಾರ್ಡಿಂಗ್‌ ಇದೆ, ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದರೆ ಥಾಣೆ ಮತ್ತು ನಾಗ್ಪುರ್‌ ಪೊಲೀಸ್‌ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಥಾಣೆಯ ದೈಘರ್‌ ಎಂಬಲ್ಲಿ ಸಕಲ್‌ ಹಿಂದು ಸಮಾಜ್‌ ಕಾರ್ಯಕ್ರಮದಲ್ಲಿ ವಿಹಿಂಪ ನಾಯಕಿ ಸಾಧ್ವಿ ಸರಸ್ವತಿ, ಹಿಂದು ಸಂತ ಭರತನಂದ ಸರಸ್ವತಿ ಮತ್ತು ಜೈನ ಮುನಿ ನಿಲೇಶ್‌ ಚಂದ್ರ ಮಹಾರಾಜ್‌ ಲವ್‌ ಜಿಹಾದ್‌ ಮತ್ತು ಜಮೀನು ಜಿಹಾದ್‌ ಕುರಿತು ದ್ವೇಷಕಾರಕ ಭಾಷಣಗಳನ್ನು ನೀಡಿದ್ದರು.

ಸಾಧ್ವಿ ಸರಸ್ವತಿ ತನ್ನ ಭಾಷಣದಲ್ಲಿ ಹಿಂದು ಮಹಿಳೆಯರಿಗೆ ಕರೆ ನೀಡಿ ಕುಟುಂಬದ ಪುರುಷರಿಗೆ ತೀವ್ರಗಾಮಿಗಳಾಗಲು ಪ್ರೇರೇಪಿಸಬೇಕು ಹಾಗೂ ಧರ್ಮವನ್ನು  ಉಳಿಸಲು ಹತ್ಯೆಗೈಯ್ಯಲು ಅಥವಾ ಬಲಿದಾನಕ್ಕಾಗಿ ಸಿದ್ಧರಿರಬೇಕೆಂದು ಹೇಳಿದರು ಎಂದು newslaundry.com ವರದಿ ಮಾಡಿದೆ. 

ಸೌಂದರ್ಯ ಪ್ರಸಾದನಗಳ ಬದಲು ಹಿಂದು ಹುಡುಗಿಯರು ಖಡ್ಗಗಳನ್ನು ಖರೀದಿಸಬೇಕು ಹಾಗೂ ವಿಧರ್ಮಿಗಳಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ. 

ಮುಖ್ಯಮಂತ್ರಿಯ ಪುತ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೈನ ಮುನಿ ನಿಲೇಶ್‌ ಚಂದ್ರ ಮಾತನಾಡಿ, ಮುಸ್ಲಿಮರನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಅವರಿಂದ ಕಲಿಯಬೇಕು ಎಂದು ಹೇಳಿದರು. ಮಹಾತ್ಮ ಗಾಂಧಿಯನ್ನು ಹತ್ಯೆಗೈಯ್ಯದೇ ಇದ್ದರೆ ಹಿಂದು ಸಮುದಾಯ ಈಗ ಮಕ್ಕಾ ಮದೀನಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿತ್ತು ಎಂದೂ ಅವರು ಹೇಳಿದ್ದಾರೆ.

ಹಿಂದು ಜನಜಾಗೃತಿ ಸಮಿತಿ ಜಲಗಾಂವ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಭಾಷಣಕಾರರೊಬ್ಬರು ಹಿಂದು ಹುಡುಗಿಯರನ್ನು ಲವ್‌ ಜಿಹಾದ್‌ನಲ್ಲಿ ಸಿಲುಕಿಸಿ  ನಂತರ ಕೊಲ್ಲಲಾಗುತ್ತಿದೆ ಎಂದು ಹೇಳಿದರು.

Similar News