ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವಸನೀಯತೆಯನ್ನು ಪ್ರಶ್ನಿಸಿದ ಕೇಂದ್ರ

Update: 2023-05-10 17:01 GMT

ಹೊಸದಿಲ್ಲಿ,ಮೇ 10: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವಸನೀಯತೆಯನ್ನು  ಕೇಂದ್ರ ಸರಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಗಳವಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಬಿಲ್ಕಿಸ್ ಬಾನು ಸಾಮೂಹಿಕ  ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗ ಬಿಡುಗಡೆಯನ್ನು  ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಆಲಿಕೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ನ್ಯಾಯಪೀಠವು  ವ್ಯಕ್ತಪಡಿಸಿದ ಅನಿಸಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಬಿಲ್ಕಿಸ್ ಬಾನು  ಪ್ರಕರಣದ ಅಪರಾಧಿಗಳ ಬಿಡುಗಡೆ ಪ್ರಶ್ನಿಸುವ ಅರ್ಜಿಗಳ ಮುಂದಿನ ಆಲಿಕೆಯನ್ನು ದಿನಾಂಕವನ್ನು ನ್ಯಾಯಾಲಯವು  ಜುಲೈ 10ಕ್ಕೆ ನಿಗದಿಪಡಿಸಲಾಗಿದ್ದು, ಈ ಕುರಿತ ನೋಟಿಸನ್ನು  ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಆದೇಶಿಸಿದರು. ಪ್ರಕರಣ ಅಪರಾಧಿಗಳಿಗೆ ಈ ಮೊದಲು ಕೋರ್ಟ್ ನೋಟಿಸ್ ದೊರೆಯದಿರುವ ಹಿನ್ನೆಲೆಯಲ್ಲಿ, ಈ ಬಾರಿ ನೋಟಿಸನ್ನು ಪತ್ರಿಕೆಗಳಲ್ಲಿಯೂ ಪ್ರಕಟಿಸುವಂತೆ ನ್ಯಾಯಪೀಠ ಸೂಚಿಸಿದೆ.

ಆಲಿಕೆಯ ವೇಳೆ ಕೇಂದ್ರ ಸರಕಾರದ ಪರ ನ್ಯಾಯವಾದಿ ಅಟಾರ್ನಿ ಜನರಲ್ ತುಷಾರ್ ಮೆಹ್ತಾ, ಹಾಗೂ  ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ಈ ನೋಟಿಸನ್ನು  ಯಾವ ಸುದ್ದಿಪತ್ರಿಕೆಗಳಲ್ಲಿ ಪ್ರಕಟಿಸಬೇಕೆಂಬ ಬಗ್ಗೆ  ಚರ್ಚಿಸಿದ್ದರು.

‘‘ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಸುದ್ದಿಪತ್ರಿಕೆಗಳಿವೆ.  ಆದರೆ  ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಾವು 161ನೇ ಸ್ಥಾನದಲ್ಲಿದ್ದೇವೆ. ಆದರೆ ನನ್ನ ಈ ಅನಿಸಿಕೆಯನ್ನು ತಪ್ಪಾಗಿ  ಉಲ್ಲೇಖಿಸಲಾಗುವುದಿಲ್ಲವೆಂದು ನಾನು ಆಶಿಸುತ್ತೇನೆ’’ ಎಂದು ಜೋಸೆಫ್ ಹೇಳಿದರು.

ಆದರೆ ಮೆಹ್ತಾ ಅವರು ಜಾಗತಿಕ  ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ವರದಿಯನ್ನು ಅಲ್ಲಗಳೆದರು ಹಾಗೂ ಈ ರ್ಯಾಂಕಿಂಗ್ ಪ್ರಕ್ರಿಯೆಯನ್ನು  ಯಾರು ಕೈಗೊಂಡಿದ್ದರೆಂದು ಪ್ರಶ್ನಿಸಿದ್ದರು.  ವರದಿಯ ಸಾಚಾತನವು ಯಾರು ಈ ರೇಟಿಂಗ್ ನೀಡುತ್ತಾರೆಂಬ ಅಂಶವನ್ನು ಆಧರಿಸಿದೆ ಎಂದರು.

‘‘ ರ್ಯಾಂಕಿಂಗ್  ನೀಡಿಕೆಯು ವ್ಯಕ್ತಿಯನ್ನು ಅವಲಂಭಿಸಿರುತ್ತದೆ.  ಒಂದು ವೇಳೆ ನಾನಾಗಿರುತ್ತಿದ್ದರೆ ಭಾರತಕ್ಕೆ ಮೊದಲ ಸ್ಥಾನ ನೀಡುತ್ತಿದ್ದೆ ಎಂದು ಮೆಹ್ತಾ ಹೇಳಿದರು.
2022ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ರ್ಯಾಂಕಿಂಗ್ 150ರಿಂದ 161ನೇ ಸ್ಥಾನಕ್ಕೆ ಕುಸಿದಿರುವುದಾಗಿ ಮಾಧ್ಯಮ ಕಣ್ಗಾವಲು ಸಂಸ್ಥೆ ‘ರಿಪೋರ್ಟರ್ಸ್ ಸ್ಯಾನ್ಸ್ ಫ್ರಂಟಿಯರ್ಸ್’ ತನ್ನ ಮೇ 2ರ ವರದಿಯಲ್ಲಿ ತಿಳಿಸಿತ್ತು.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (150), ಅಫ್ಘಾನಿಸ್ತಾನ (152), ಶ್ರೀಲಂಕಾ (135) ಹಾಗೂ ನೇಪಾಳ (95)ಕ್ಕಿಂತಲೂ ಭಾರತದ ರ್ಯಂಕಿಂಗ್ ಕಳಪೆಯಾಗಿದೆಯೆಂದು ವರದಿ ತಿಳಿಸಿದೆ.
ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಸಿದ್ಧಪಡಿಸಲು ರಿಪೋರ್ಟರ್ಸ್ ಸ್ಯಾನ್ಸ್ ಫ್ರಂಟಿಯರ್ಸ್ ಅನುಸರಿಸಿರುವ ವಿಧಾನವನ್ನು  ಮೋದಿ ಸರಕಾರ   ಕೂಡಾ ಪ್ರಶ್ನಿಸಿತ್ತು ಹಾಗೂ ಭಾರತವು ಅಗಾಧವಾದ  ಪತ್ರಿಕಾ ಸ್ವಾತಂತ್ರ್ಯವನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ಪ್ರತಿಪಾದಿಸಿತ್ತು.

ಕೇಂದ್ರ  ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ  ಅನುರಾಗ್ ಠಾಕೂರ್ ಅವರು ಕೂಡಾ 2021ರ ಸೂಚ್ಯಂಕದಲ್ಲಿ ಭಾರತದ ರ್ಯಾಂಕಿಂಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಒಂದು ಸಣ್ಣ ಪ್ರಮಾಣದ ಸ್ಯಾಂಪಲ್ ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ ಹಾಗೂ ಪ್ರಜಾಪ್ರಭುತ್ವದ  ಮೂಲತಭೂತ ಅಂಶಗಳಿಗೆ ವರದಿಯು ಯಾವುದೇ ಮಹತ್ವವನ್ನು ನೀಡಿಲ್ಲವೆಂದು ಹೇಳಿದ್ದರು.

ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದಲ್ಲಿ ಭಾರತದ ರ್ಯಾಂಕಿಂಗ್ 2021ರಲ್ಲಿ 142 ಆಗಿದ್ದರೆ. 2022ರಲ್ಲಿ ಅದು 150ಕ್ಕೆ ಕುಸಿದಿದೆ.

Similar News