ರಾಜಸ್ಥಾನದಲ್ಲಿ ಲಿತಿಯಮ್ ನಿಕ್ಷೇಪ ಪತ್ತೆಯಾಗಿರುವುದು ಸುಳ್ಳು: ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಇಲಾಖೆ

Update: 2023-05-10 17:21 GMT

ಹೊಸದಿಲ್ಲಿ, ಮೇ 10: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಲಿತಿಯಮ್ ನಿಕ್ಷೇಪ ಪತ್ತೆಯಾಗಿದೆ ಎಂಬ ರಾಜಸ್ಥಾನ ಸರಕಾರದ ಹೇಳಿಕೆಯನ್ನು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ಮಂಗಳವಾರ ನಿರಾಕರಿಸಿದೆ.

ನಾಗೌರ್ ಜಿಲ್ಲೆಯ ದೇಗಣ ತಾಲೂಕಿನಲ್ಲಿ ಅಗಾಧ ಪ್ರಮಾಣದಲ್ಲಿ ಲಿತಿಯಮ್ ನಿಕ್ಷೇಪ ಇರುವುದು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ರಾಜಸ್ಥಾನದ ಗಣಿ ಸಚಿವ ಪ್ರಮೋದ್ ಭಾಯ ಹೇಳಿದ ಗಂಟೆಗಳ ಬಳಿಕ ಇಲಾಖೆಯು ಈ ಹೇಳಿಕೆ ನೀಡಿದೆ.

ರಾಜಸ್ಥಾನದಲ್ಲಿ ಪತ್ತೆಯಾಗಿರುವ ಲಿತಿಯಮ್ ನಿಕ್ಷೇಪವು ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿರುವ ಲಿತಿಯಮ್ ನಿಕ್ಷೇಪಕ್ಕಿಂತ ತುಂಬಾ ಹೆಚ್ಚಾಗಿದೆ ಎಂಬುದಾಗಿಯೂ ಸಚಿವರು ಹೇಳಿದ್ದರು.

ಲಿತಿಯಮ್ ಅಪರೂಪದ ಖನಿಜವಾಗಿದೆ. ಇಲೆಕ್ಟ್ರಿಕ್ ವಾಹನಗಳು ಹಾಗೂ ಸ್ಮಾರ್ಟ್ ಫೋನ್ ಗಳು ಮತ್ತು ಲ್ಯಾಪ್ ಟಾಪ್ ಗಳು ಮುಂತಾದ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ರಿಚಾರ್ಜ್ ಮಾಡುವ ಬ್ಯಾಟರಿಗಳ ಪ್ರಮುಖ ಭಾಗ ಇದಾಗಿದೆ.
‘‘ರಾಜಸ್ಥಾನದ ನಾಗೌರ್ ಜಿಲ್ಲೆಯ ದೇಗಣ ಪ್ರದೇಶದಲ್ಲಿ ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಇಲಾಖೆಯು ಭಾರೀ ಪ್ರಮಾಣದ ಲಿತಿಯಮ್ ಖನಿಜವನ್ನು ಪತ್ತೆಹಚ್ಚಿದೆ ಎನ್ನುವುದಕ್ಕೆ ಸಂಬಂಧಿಸಿದ ಪತ್ರಿಕಾ ಮತ್ತು ಮಾಧ್ಯಮ ವರದಿಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು’’ ಎಂದು ಹೇಳಿಕೆಯಲ್ಲಿ ಇಲಾಖೆ ತಿಳಿಸಿದೆ.

Similar News