ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ದಿಲ್ಲಿ ಸೇವಾ ಇಲಾಖೆ ಕಾರ್ಯದರ್ಶಿಯನ್ನು ವಜಾಗೊಳಿಸಿದ ಕೇಜ್ರಿವಾಲ್ ಸರ್ಕಾರ

Update: 2023-05-11 16:23 GMT

ಹೊಸದಿಲ್ಲಿ: ಅಧಿಕಾರಗಳ ನಿಯಂತ್ರಣ ಮತ್ತು ನಿಯೋಜನೆ ಕುರಿತು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ, ಅರವಿಂದ್ ಕೇಜ್ರಿವಾಲ್ ಸರ್ಕಾರವು ದಿಲ್ಲಿ ಸರಕಾರದ ಸೇವಾ ಇಲಾಖೆಯ ಕಾರ್ಯದರ್ಶಿ ಆಶಿಶ್ ಮೋರ್ ಅವರನ್ನು ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ಸಾರ್ವಜನಿಕ ಕೆಲಸಗಳಿಗೆ ಅಡಚಣೆ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದ್ದರು. 

"ವಿಜಿಲೆನ್ಸ್ ಈಗ ನಮ್ಮೊಂದಿಗೆ ಇರುತ್ತದೆ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಬಹುದು" ಎಂದು ಅವರು ಹೇಳಿದ್ದರು.

"ಚುನಾಯಿತ ಸರ್ಕಾರವು ಅಧಿಕಾರಿಗಳ ವರ್ಗಾವಣೆ-ನಿಯೋಜನೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಅಧಿಕಾರಿಗಳು ಚುನಾಯಿತ ಸರ್ಕಾರದ ಮೂಲಕ ಮಾತ್ರ ಕೆಲಸ ಮಾಡಬೇಕು" ಎಂದು ಎಎಪಿ ಟ್ವೀಟ್ ಮಾಡಿದೆ.

 ತನಗೆ ಓರ್ವ ಗುಮಾಸ್ತನನ್ನೂ ನೇಮಿಸಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ, ತಮ್ಮ ನಿಯಂತ್ರಣ ಅಧಿಕಾರವನ್ನು ಕೇಂದ್ರ ಗೃಹ ಸಚಿವಾಲಯ ಹೊಂದಿದೆ ಎಂದು ಭಾವಿಸುವ ಅಧಿಕಾರಿಗಳು ತನ್ನ ಸರ್ಕಾರದ ಆದೇಶಗಳನ್ನು ಪಾಲಿಸುವುದಿಲ್ಲ ಎಂದು ಕೇಜ್ರಿವಾಲ್ ಆರೋಪಿಸುತ್ತಲೇ ಬಂದಿದ್ದರು. 
 

ದೆಹಲಿ ಸರ್ಕಾರಕ್ಕೆ ಸೇವೆಗಳ ಆಡಳಿತದ ಮೇಲೆ ಶಾಸಕಾಂಗ ಮತ್ತು ಕಾರ್ಯನಿರ್ವಾಹಕ ಅಧಿಕಾರ ಇದೆ.  ಕೇವಲ ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿಯನ್ನು ಮಾತ್ರ ಅದರ ಅಧಿಕಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಜಾಪ್ರಭುತ್ವದಲ್ಲಿ ಆಡಳಿತದ ಅಧಿಕಾರವು ಚುನಾಯಿತ ಸರ್ಕಾರದ ತೋಳಿನ ಮೇಲೆ ನಿಂತಿರಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.  ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಕ್ಕೆ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ನೀಡದಿದ್ದರೆ, ಉತ್ತರದಾಯಿತ್ವದ ತ್ರಿವಳಿ ಸರಪಳಿಯ ತತ್ವವು ಅನಗತ್ಯವಾಗುತ್ತದೆ.  ಅಧಿಕಾರಿಗಳು ಮಂತ್ರಿಗಳಿಗೆ ವರದಿ ಮಾಡುವುದನ್ನು ನಿಲ್ಲಿಸಿದರೆ ಅಥವಾ ಅವರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಸಾಮೂಹಿಕ ಜವಾಬ್ದಾರಿಯ ತತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದರು.

Similar News