ವಿವಾಹಕ್ಕೆ ನಿರಾಕರಣೆ: ಬುಡಕಟ್ಟು ಬಾಲಕಿಯ ಥಳಿಸಿ, ತಲೆ ಬೋಳಿಸಿ ಮೆರವಣಿಗೆ

Update: 2023-05-15 18:16 GMT

ಹೊಸದಿಲ್ಲಿ, ಮೇ 15: ಕುಟುಂಬ ನಿರ್ಧರಿಸಿದ ವ್ಯಕ್ತಿಯನ್ನು ವಿವಾಹವಾಗುವಂತೆ ಪಂಚಾಯತ್ ನೀಡಿದ ಆದೇಶ ಅನುಸರಿಸಲು ನಿರಾಕರಿಸಿದ ಬುಡಕಟ್ಟು ಬಾಲಕಿಯೋರ್ವಳ ಥಳಿಸಿ, ತಲೆ ಬೋಳಿಸಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಜಾರ್ಖಂಡ್‌ನ ಪಾಲಮು ಜಿಲ್ಲೆಯ ಜೋಗಿದಿಹ ಗ್ರಾಮದಲ್ಲಿ ನಡೆದಿದೆ.

ಅಂತಿಮವಾಗಿ ಆಕೆಯನ್ನು ಅರಣ್ಯದಲ್ಲಿ ಬಿಡಲಾಗಿದೆ. ಮಾಹಿತಿ ಸ್ವೀಕರಿಸಿದ ಬಳಿಕ ಪೊಲೀಸರು ಬಾಲಕಿಯನ್ನು ಅರಣ್ಯದಲ್ಲಿ ಪತ್ತೆ ಹಚ್ಚಿದ್ದಾರೆ. ಅಲ್ಲದೆ, ಪಾಲಮುನಲ್ಲಿರುವ ರಾಜಾ ಮೇದಿನಿ ರಾಯ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆಕೆಯ ದೇಹದ ಹಲವು ಭಾಗಗಳಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ.

ಬಾಲಕಿಯ ಹೆತ್ತವರು ತೀರಿಕೊಂಡಿದ್ದಾರೆ. ಆಕೆಯ ಮೂವರು ಸಹೋದರಿಯರಿಗೆ ವಿವಾಹವಾಗಿದೆ. ಸಹೋದರ ಅನಾರೋಗ್ಯ ಪೀಡಿತನಾಗಿದ್ದಾನೆ. ಓರ್ವ ಸಹೋದರಿ ಆಕೆಯನ್ನು ಲತೇಹಾರ್ ಜಿಲ್ಲೆಯ ಮಾಣಿಕಾದ ವ್ಯಕ್ತಿಯೊಂದಿಗೆ ವಿವಾಹ ಏರ್ಪಡಿಸಿದ್ದರು. ಆದರೆ, ಬಾಲಕಿ ಆತನನ್ನು ವಿವಾಹವಾಗಲು ನಿರಾಕರಿಸಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೂ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

Similar News