2021-22ರಲ್ಲಿ 27 ಪ್ರಾದೇಶಿಕ ಪಕ್ಷಗಳಿಗೆ ಅಜ್ಞಾತ ಮೂಲಗಳಿಂದ ಶೇ.76ರಷ್ಟು ಆದಾಯ: ವರದಿ

Update: 2023-05-17 13:40 GMT

ಹೊಸದಿಲ್ಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಂತೆ 2021-22ರಲ್ಲಿ 27 ಪ್ರಾದೇಶಿಕ ರಾಜಕೀಯ ಪಕ್ಷಗಳು 887.551 ಕೋ.ರೂ.ಅಥವಾ ತಮ್ಮ ಒಟ್ಟು ಘೋಷಿತ ಆದಾಯದ ಶೇ.76.14ರಷ್ಟನ್ನು ಅಜ್ಞಾತ ಮೂಲಗಳಿಂದ ಸ್ವೀಕರಿಸಿವೆ.

ಈ ಪೈಕಿ 827.76 ಕೋ.ರೂ.ಅಥವಾ ಅಜ್ಞಾತ ಮೂಲಗಳಿಂದ ಆದಾಯದ ಶೇ.93.26ರಷ್ಟು ಚುನಾವಣಾ ಬಾಂಡ್ ಗಳ ಮೂಲಕ ಬಂದಿದೆ ಎಂದು ವರದಿಯು ತಿಳಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವ ದೇಣಿಗೆ ವರದಿಗಳ ಮೂಲಕ ದಾನಿಗಳ ವಿವರಗಳು ಲಭ್ಯವಿರುವ ಆದಾಯವನ್ನು ಬಲ್ಲ ಮೂಲಗಳಿಂದ ಆದಾಯ ಎಂದು ಎಡಿಆರ್ ವ್ಯಾಖ್ಯಾನಿಸಿದೆ. ವಾರ್ಷಿಕ ಲೆಕ್ಕ ಪರಿಶೋಧನೆ ವರದಿಗಳಲ್ಲಿ ಘೋಷಿಸಲಾಗಿರುವ,ಆದರೆ ಮೂಲವನ್ನು ನೀಡಿರದ ಅದಾಯವು ಅಜ್ಞಾತ ಮೂಲಗಳಿಂದ ಆದಾಯವಾಗಿದೆ.

ಪ್ರಸ್ತುತ ರಾಜಕೀಯ ಪಕ್ಷಗಳು 20,000 ರೂ.ಗಿಂತ ಹೆಚ್ಚಿನ ಎಲ್ಲ ದೇಣಿಗೆಗಳನ್ನು ತಮ್ಮ ದೇಣಿಗೆ ವರದಿಗಳಲ್ಲಿ ಬಹಿರಂಗಪಡಿಸಬೇಕಾಗುತ್ತದೆ.
ವರದಿಯಲ್ಲಿ ವಿಶ್ಲೇಷಿಸಲಾಗಿರುವ 27 ಪ್ರಾದೇಶಿಕ ಪಕ್ಷಗಳು 2021-22ರಲ್ಲಿ ಒಟ್ಟು 1,165.57 ಕೋ.ರೂ.ಗಳ ಆದಾಯವನ್ನು ಘೋಷಿಸಿದ್ದು,ಈ ಪೈಕಿ 145.42 ಕೋ.ರೂ.ಅಥವಾ ಶೇ.12.48ರಷ್ಟು ಬಲ್ಲ ದಾನಿಗಳಿಂದ ಬಂದಿವೆ.

ಡಿಎಂಕೆ ಅಜ್ಞಾತ ಮೂಲಗಳಿಂದ ಅತ್ಯಂತ ಹೆಚ್ಚಿನ ಆದಾಯ (306.02 ಕೋ.ರೂ.)ವನ್ನು ಗಳಿಸಿದ್ದರೆ,ಬಿಜೆಡಿ (291.09 ಕೋ.ರೂ.),ಭಾರತ ರಾಷ್ಟ್ರ ಸಮಿತಿ (153.03 ಕೋ.ರೂ.),ಯುವಜನ ಶ್ರಮಿಕ ರೈತ ಕಾಂಗ್ರೆಸ್ (60.01 ಕೋ.ರೂ.) ಮತ್ತು ಜೆಡಿಯು (48.36 ಕೋ.ರೂ.) ನಂತರದ ಸ್ಥಾನಗಳಲ್ಲಿವೆ.

Similar News