ಉಮರ್‌ ಖಾಲಿದ್‌ ಜಾಮೀನು ಅರ್ಜಿ ಪ್ರಕರಣ: 6 ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಪೊಲೀಸರಿಗೆ ಸುಪ್ರೀಂ ನೋಟಿಸ್‌

Update: 2023-05-18 09:14 GMT

ಹೊಸದಿಲ್ಲಿ: ಫೆಬ್ರವರಿ 2020ರ ದಿಲ್ಲಿ ಹಿಂಸಾಚಾರದ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಪ್ರಕರಣ ಎದುರಿಸುತ್ತಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಅವರ ಜಾಮೀನು ಅರ್ಜಿಯ ಕುರಿತು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದಿಲ್ಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.

ನೋಟಿಸ್‌ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠ ಆರು ವಾರಗಳೊಳಗೆ ಪ್ರತಿಕ್ರಿಯೆ ಕೇಳಿದೆ.

ಘಟನೆ ನಡೆದ ದಿನ ತಮ್ಮ ಕಕ್ಷಿಗಾರರು ರಾಜಧಾನಿಯಲ್ಲಿರಲಿಲ್ಲ ಎಂದು ಖಾಲಿದ್‌ ಪರ ವಕೀಲ ಕಪಿಲ್‌ ಸಿಬಲ್‌ ಹೇಳಿದರು.

ಮುಂದಿನ ವಿಚಾರಣೆಯನ್ನು ಬೇಸಿಗೆ ರಜಾ ನಂತರ ನಿಗದಿಪಡಿಸಲಾಗಿದೆ. ಮೇ 22ರಂದು ಆರಂಭವಾಗಲಿರುವ ನ್ಯಾಯಾಲಯದ ಬೇಸಿಗೆ ರಜೆ ಜುಲೈ 2 ರಂದು ಅಂತ್ಯಗೊಳ್ಳಲಿದೆ.

ಕಳೆದ ವರ್ಷದ ಅಕ್ಟೋಬರ್‌ 18ರಂದು ದಿಲ್ಲಿ ಹೈಕೋರ್ಟ್‌ ಖಾಲಿದ್‌ ಆವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತಲ್ಲದೆ ಅವರು ಸಹ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದರು ಹಾಗೂ ಅವರ ವಿರುದ್ಧದ ಆರೋಪಗಳು ಹೊರನೋಟಕ್ಕೆ ನಿಜವೆಂದು ತೋರುತ್ತಿದೆ ಎಂದು ಹೇಳಿತ್ತು.

ಆದರೆ ಇದನ್ನು ಪ್ರಶ್ನಿಸಿ ಖಾಲಿದ್‌ ಅವರು ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು. ಯುಎಪಿಎ ಪ್ರಕರಣದಲ್ಲಿ ಅವರು ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಬಂಧನದಲ್ಲಿದ್ದಾರೆ.

Similar News