ಉತ್ತರಪ್ರದೇಶ: ಎಸ್‌ಎನ್ ವಿ.ವಿ.ಯಲ್ಲಿ ಗೆಳತಿಯ ಹತ್ಯೆಗೈದು, ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ‌

Update: 2023-05-18 16:29 GMT

ಹೊಸದಿಲ್ಲಿ, ಮೇ 18: ವಿದ್ಯಾರ್ಥಿಯೋರ್ವ ಗೆಳತಿಗೆ ಗುಂಡು ಹಾರಿಸಿ ಹತ್ಯೆಗೈದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಮಾಜಶಾಸ್ತ್ರದ ಮೂರನೇ ವರ್ಷದ ವಿದ್ಯಾರ್ಥಿ ಅನುಜ್ ವಿಶ್ವವಿದ್ಯಾನಿಲಯದ ಊಟದ ಹಾಲ್‌ನಲ್ಲಿ ತನ್ನ ಗೆಳತಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಬಳಿಕ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. 

ಗೆಳತಿಗೆ ಗುಂಡು ಹಾರಿಸಿ ಹತ್ಯೆಗೈದ ಬಳಿಕ ಅನುಜ್ ಪುರುಷರ ಹಾಸ್ಟೆಲ್ ಕೊಠಡಿಗೆ ತೆರಳಿದ್ದಾನೆ. ಅಲ್ಲಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನುಜ್ ಹಾಗೂ ಯುವತಿ ಉತ್ತಮ ಗೆಳೆಯರಾಗಿದ್ದರು. ಕಳೆದ ಕೆಲವು ಸಮಯದಿಂದ ಅವರ ನಡುವೆ ವೈಮನಸ್ಸು ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Similar News