2000 ರೂ. ನೋಟುಗಳನ್ನು‌ ಚಲಾವಣೆಯಿಂದ ಹಿಂಪಡೆಯಲಿರುವ RBI

ಈ ದಿನಾಂಕದೊಳಗೆ ಬದಲಾಯಿಸಲು ಸೂಚನೆ

Update: 2023-05-19 15:29 GMT

ಹೊಸದಿಲ್ಲಿ: 2000 ರೂ.ಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಘೋಷಿಸಿದೆ. ಅಲ್ಲದೇ 2023ರ ಸೆಪ್ಟೆಂಬರ್‌ 30ರ ಒಳಗಡೆ ನೋಟುಗಳನ್ನು ಬದಲಾಯಿಸಬೇಕಾಗಿ RBI ಸೂಚಿಸಿದೆ.

ಸರಿಯಾದ ಸಮಯದಲ್ಲಿ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಸಮಯ ಲಭ್ಯವಾಗಲು ಎಲ್ಲಾ ಬ್ಯಾಂಕ್‌ಗಳಲ್ಲಿ ಸೆಪ್ಟೆಂಬರ್‌ 30, 2023ರವರೆಗೆ ಅವಕಾಶ ನೀಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ. 

ರೂ. 2000 ಮುಖಬೆಲೆಯ ನೋಟುಗಳ ವಿನಿಮಯವನ್ನು ಭಾರತೀಯ ರಿಸರ್ವ್ ಬ್ಯಾಂಕಿನ 19 ಪ್ರಾದೇಶಿಕ ಕಚೇರಿಗಳು ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ಕಡಿಮೆ ಮುಖಬೆಲೆಯ ನೋಟುಗಳಿಗೆ ಮೇ 23ರಿಂದ ಪ್ರಾರಂಭಿಸಲಿವೆ. ಆದರೆ, ರೂ. 2000 ಮುಖಬೆಲೆ ನೋಟುಗಳ ಕಾನೂನುಬದ್ಧ ಚಲಾವಣೆ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ.

ತಕ್ಷಣದಿಂದಲೇ ರೂ. 2000 ಮುಖಬೆಲೆಯ ನೋಟುಗಳ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಎಲ್ಲ ಬ್ಯಾಂಕುಗಳಿಗೂ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.

"2000ರೂ. ಮುಖಬೆಲೆಯ ನೋಟುಗಳನ್ನು 2016ರ ನವೆಂಬರ್‌ ನಲ್ಲಿ ಪರಿಚಯಿಸಲಾಯಿತು. ಆ ಸಂದರ್ಭದಲ್ಲಿ 500 ಮತ್ತು 1000ರೂ. ನೋಟುಗಳನ್ನು ಹಿಂಪಡೆದಿದ್ದ ಕಾರಣ ಆರ್ಥಿಕತೆ ಸುಸ್ಥಿತಿಯಲ್ಲಿ ಸಾಗಲು 2000ರೂ. ನೋಟುಗಳನ್ನು ಮುದ್ರಿಸಲಾಯಿತು. ಈ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಬಳಿಕ 2018ರಲ್ಲಿ 2000 ರೂ. ನೋಟುಗಳ ಮುದ್ರಣ ನಿಲ್ಲಿಸಲಾಯಿತು" ಎಂದು ಸುತ್ತೋಲೆ ಉಲ್ಲೇಖಿಸಿದೆ.

ಬ್ಯಾಂಕ್ ಶಾಖೆಗಳ ನಿಯಮಿತ ಚಟುವಟಿಕೆಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಹಾಗೂ ಕಾರ್ಯನಿರ್ವಹಣೆಯ ಅನುಕೂಲತೆಯನ್ನು ಖಾತ್ರಿಗೊಳಿಸಲು ಮೇ. 23, 2023ರಿಂದ ಎಲ್ಲ ಬ್ಯಾಂಕ್‍ಗಳಲ್ಲೂ ರೂ. 20,000ವರೆಗೆ ರೂ. 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದೂ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

2016ರ ನವೆಂಬರ್ ನಲ್ಲಿ 2,000 ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಅಂದು 1,000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯಲಾಗಿತ್ತು. 2018-19ರಲ್ಲಿ ರೂ. 2,000 ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.


ಮುಖ್ಯಾಂಶಗಳು

►ಚಲಾವಣೆಯಿಂದ ಹೊರಬಂದರೂ ರೂ. 2000 ಕಾನೂನುಬದ್ಧ ಕರೆನ್ಸಿ ನೋಟ್ ಆಗಿಯೇ ಮುಂದುವರಿಕೆ

►ಮೇ 23ರಿಂದ ಸೆಪ್ಟಂಬರ್ 30ರವರೆಗೆ ಸಾರ್ವಜನಿಕರು ಯಾವುದೇ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು

►ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಇತರ ಮುಖಬೆಲೆಯ ನೋಟುಗಳಿಗಾಗಿ ವಿನಿಮಯ ಮಾಡಿಕೊಳ್ಳಬಹುದು

►ಒಮ್ಮೆ ವಿನಿಮಯ ಮಾಡುವಾಗ ಗರಿಷ್ಠ 20,000 ರೂ. ಮೌಲ್ಯದ ರೂ. 2000 ಮುಖಬೆಲೆಯ ನೋಟುಗಳಿಗ ಅವಕಾಶ

►RBIಯ 10 ಪ್ರಾದೇಶಿಕ ಕಚೇರಿಗಳಲ್ಲೂ ಮೇ 23ರಿಂದ ವಿನಿಮಯಕ್ಕೆ ಅವಕಾಶ.

Similar News