ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡುವುದನ್ನು ನಿಲ್ಲಿಸಿ: ಶಿಯೋಮಿ ಸ್ಮಾರ್ಟ್‌ಫೋನ್ ನಿರ್ಮಾಣ ಸಂಸ್ಥೆಯ ಮಾಜಿ ಮುಖ್ಯಸ್ಥ

Update: 2023-05-20 08:38 GMT

ಹೊಸದಿಲ್ಲಿ: ಸ್ಮಾರ್ಟ್‌ಫೋನ್ ಬಳಕೆ ಮಕ್ಕಳ ಪಾಲಿಗೆ ಹಾನಿಕಾರಕ ಎಂದು ಎಚ್ಚರಿಸಿರುವ ಶಿಯೋಮಿ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಯ ಮಾಜಿ ಮುಖ್ಯಸ್ಥ ಮನುಕುಮಾರ್ ಜೈನ್, "ನಿಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡುವುದನ್ನು ನಿಲ್ಲಿಸಿ" ಎಂದು ಪೋಷಕರಿಗೆ ಸೂಚಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಈ ಕುರಿತು ಚಿಂತನೆಗೆ  ಹಚ್ಚುವ ಲಿಂಕ್ಡ್‌ಇನ್ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜೈನ್, "ಓರ್ವ ಗೆಳೆಯ ಸೇಪಿಯನ್ಸ್ ಪ್ರಯೋಗಾಲಯದಿಂದ ನನಗೊಂದು ವರದಿಯನ್ನು ಹಂಚಿಕೊಂಡಿದ್ದು, ಅದರ ಪ್ರಕಾರ, ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ನೀಡುವುದಕ್ಕೂ, ಯೌವನಾವಸ್ಥೆಯಲ್ಲಿ ಅವರು ಮಾನಸಿಕ ತೊಂದರೆಯಿಂದ ಬಳಲುವ ಸಾಧ್ಯತೆಗೂ ಕಳಕವಳಕಾರಿ ಸಂಬಂಧವಿದೆ. 

ಅಧ್ಯಯನದಿಂದ ಹೊರಬಂದಿರುವ ಅಂಕಿ-ಸಂಖ್ಯೆಗಳು ಆಘಾತಕಾರಿಯಾಗಿದ್ದು, 10 ವರ್ಷಕ್ಕೂ ಮುಂಚಿತವಾಗಿಯೇ ಸ್ಮಾರ್ಟ್‌ಫೋನ್ ಬಳಕೆಗೆ ತೆರೆದುಕೊಂಡ ಮಹಿಳೆಯರು  ಪೈಕಿ ಶೇ. 60-70 ಮಂದಿ ತಮ್ಮ ಯೌವನಾವಸ್ಥೆಯಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪುರುಷರೂ ಇದರಿಂದ ಹೊರತಾಗಿಲ್ಲ. 10 ವರ್ಷಕ್ಕೂ ಮುಂಚಿತವಾಗಿಯೇ ಸ್ಮಾರ್ಟ್‌ಫೋನ್ ಬಳಕೆಗೆ ತೆರೆದುಕೊಂಡ ಪುರುಷರ ಪೈಕಿ ಶೇ.‌45-50 ಮಂದಿ ನಂತರದ ತಮ್ಮ ಬದುಕಿನಲ್ಲಿ ಇಂತಹುದೇ ಸವಾಲುಗಳನ್ನು ಎದುರಿಸುತ್ತಿದ್ದಾರೆ" ಎಂದು ಸೇಪಿಯನ್ಸ್ ಪ್ರಯೋಗಾಲಯದ ವರದಿಯನ್ನು "ಮಕ್ಕಳಿಗೆ ಸ್ಮಾರ್ಟ್‌ಫೋನ್ ನೀಡುವುದನ್ನು ನಿಲ್ಲಿಸಿ" ಎಂಬ ಶೀರ್ಷಿಕೆಯಡಿ ಹಂಚಿಕೊಂಡು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳು ಅಳುವಾಗ, ಊಟದ ಸಮಯದಲ್ಲಿ ಹಾಗೂ ಕಾರಿನಲ್ಲಿ ಪ್ರಯಾಣಿಸುವಾಗ ಅವರಿಗೆ ಸ್ಮಾರ್ಟ್‌ಫೋನ್ ನೀಡುವ ಉದ್ವೇಗದಿಂದ ದೂರ ಉಳಿಯಿರಿ ಎಂದು ಪೋಷಕರನ್ನು ಅವರು ಆಗ್ರಹಿಸಿದ್ದಾರೆ. ಅದರ ಬದಲು ನೈಜ ಜಗತ್ತಿನೊಂದಿಗೆ ಸಂವಾದಿಸುವುದು, ಹೊರಾಂಗಣ ಚಟುವಟಿಕೆಗಳಿಗೆ ಉತ್ತೇಜಿಸುವುದು ಹಾಗೂ ಮಕ್ಕಳನ್ನು ಹವ್ಯಾಸಗಳಲ್ಲಿ ತೊಡಗಿಸುವುದು ಬಹಳ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಇಂತಹ ಕ್ರಮಗಳಿಂದ ನೈಜ ಅಧ್ಯಯನ ಹಾಗೂ ಸಾಮಾಜಿಕ ಸಂವಾದಗಳಿಗೆ ನೆರವು ಒದಗಿಸಲು ಆರೋಗ್ಯಕರ ಹಾಗೂ ಹೆಚ್ಚು ಸಮತೋಲಿತ ವಾತಾವರಣವನ್ನು ನಿರ್ಮಿಸಬಹುದಾಗಿದೆ ಎಂದು ಜೈನ್ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಸಮಾಜದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡುವುದು ಸಾಮಾನ್ಯ ಸಂಗತಿಯಾಗಿ ಬದಲಾಗಿದ್ದು, ಮಕ್ಕಳು ಆಟವಾಡುವುದನ್ನು ಬಿಟ್ಟು, ಮೊಬೈಲ್ ಗೇಮ್ ಹಾಗೂ ತಮ್ಮ ವಯೋಮಾನಕ್ಕೆ ಹೊರತಾದ ಪ್ರದರ್ಶನಗಳನ್ನು ನೋಡುವುದರಲ್ಲಿ ಮುಳುಗಿ ಹೋಗಿದ್ದಾರೆ. ಅವರ ಇಂತಹ ಅತಿ ಹೆಚ್ಚು ಸ್ಮಾರ್ಟ್‌ಫೋನ್ ವ್ಯಸನವು ಪೋಷಕರಲ್ಲಿ ತೀವ್ರ ಕಳವಳವನ್ನುಂಟು ಮಾಡಬೇಕಿತ್ತು. ಆದರೆ, ಅದು ಹೇಗೋ ಅದು ಆಘಾತಕಾರಿ ಮೌಲ್ಯವನ್ನು ಕಳೆದುಕೊಂಡು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮನುಕುಮಾರ್ ಜೈನ್ ಅವರ ಎಚ್ಚರಿಕೆಯು ಈ ಹೊತ್ತಿನಲ್ಲಿ ಮಹತ್ವ ಪಡೆದುಕೊಂಡಿದೆ.

Similar News