'ಲೇಡಿ ಸಿಂಗಂ’ ಸಾವಿನ ಪ್ರಕರಣ ಸಿಬಿಐಗೆ ಹಸ್ತಾಂತರಿಸಿದ ಅಸ್ಸಾಂ ಸರ್ಕಾರ

Update: 2023-05-21 03:17 GMT

ಗುವಾಹತಿ: ’ಲೇಡಿ ಸಿಂಗಂ’ ಎಂದೇ ಜನಪ್ರಿಯರಾಗಿದ್ದ ದಿಟ್ಟ ಪೊಲೀಸ್ ಅಧಿಕಾರಿಣಿ ಜುನ್ಮೋನಿ ರಾಭಾ ನಿಗೂಢವಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ಕು ದಿನಗಳ ಬಳಿಕ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ಹಸ್ತಾಂತರಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ.

"ಸಾರ್ವಜನಿಕ ಭಾವನೆಗಳ" ಹಿನ್ನೆಲೆಯಲ್ಲಿ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ 30 ವರ್ಷ ವಯಸ್ಸಿನ ರಾಭಾ ಸಾವಿನ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುತ್ತಿದೆ ಎಂದು ಅಸ್ಸಾಂ ಪೊಲೀಸ್ ಇಲಾಖೆ ಪ್ರಕಟಿಸಿದೆ.

ನಾಗಾನ್ ಜಿಲ್ಲೆಯ ಮೊರಿಕೊಲಾಂಗ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ರಾಭಾ, ಮೇ 16ರಂದು ಮುಂಜಾನೆ ಖಾಸಗಿ ಕಾರಿನಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಅವರು ಚಲಾಯಿಸುತ್ತಿದ್ದ ಕಾರು ಅದೇ ಜಿಲ್ಲೆಯ ಜಖಾಲಬಂಧ ಎಂಬಲ್ಲಿ ಟ್ರಕ್ ಜತೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಮರು ಜೀವ ನೀಡಿ ಈ ಬಗ್ಗೆ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಅವರಿಗೆ ವಿವರಿಸಿದ್ದೇವೆ. ಬೆಳವಣಿಗೆಗಳ ಬಗ್ಗೆ ಅವರು ಆತಂಕ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸಾವಿಗೆ ಸಂಬಂಧಿಸಿದಂತೆ ಪ್ರಸ್ತುತ ನಾಲ್ಕು ಪ್ರಕರಣಗಳಿದ್ದು, ಪೊಲೀಸ್ ಮುಖ್ಯಸ್ಥರಾಗಿ ಇವುಗಳನ್ನು ಸಿಬಿಐಗೆ ಹಸ್ತಾಂತರಿಸಲು ನಾನು ಶಿಫಾರಸ್ಸು ಮಾಡಿದ್ದೇನೆ ಎಂದು ಪೊಲೀಸ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ರಾಭಾ ತನಿಖಾಧಿಕಾರಿಯಾಗಿದ್ದ ಕಳ್ಳನೋಟು ದಂಧೆ ಪ್ರಕರಣ, ರಾಭಾ ವಿರುದ್ಧದ ಸುಲಿಗೆ ಮತ್ತು ಡಕಾಯಿತಿ ಪ್ರಕರಣ, ಮೇ 16ರಂದು ಅವರು ಮೃತಪಟ್ಟ ಅಪಘಾತ ಪ್ರಕರಣ ಹಾಗೂ ತನ್ನ ಪುತ್ರಿಯನ್ನು ಹತ್ಯೆ ಮಾಡಲಾಗಿದೆ ಎಂದು ಆಪಾದಿಸಿ ರಾಭಾ ಅವರ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಖಲಾದ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಲಾಗುತ್ತಿದೆ ಎಂದು ವಿವರಿಸಿದರು. ಈ ನಾಲ್ಕು ಪ್ರಕರಣಗಳು ಕ್ರಮವಾಗಿ ಮೇ 5, ಮೇ 15, ಮೇ 16 ಮತ್ತು ಮೇ 19ರಂದು ದಾಖಲಾಗಿದ್ದವು.

Similar News