ಮತ್ತೆ ಚಲಾವಣೆಗೆ ಬರಲಿದೆಯೇ 1000ರೂ. ನೋಟು?: ಗವರ್ನರ್‌ ಹೇಳಿದ್ದೇನು?

Update: 2023-05-22 11:48 GMT

ಹೊಸದಿಲ್ಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯಲಾಗಿರುವ ಹಿನ್ನೆಲೆಯಲ್ಲಿ ರೂ 1000 ಮುಖಬೆಲೆಯ ನೋಟುಗಳನ್ನು ಮರುಚಲಾವಣೆಗೆ ತರುವ ಉದ್ದೇಶ ರಿಸರ್ವ್‌ ಬ್ಯಾಂಕ್‌ಗೆ ಇಲ್ಲ ಎಂದು ಸ್ಪಷ್ಟಪಡಿಸಿರುವ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಂಠ ದಾಸ್‌, ಈ ಕುರಿತ ವರದಿಗಳನ್ನು ಊಹಾಪೋಹ ಎಂದಿದ್ದಾರೆ.

“ಇದು ಊಹಾಪೋಹವಷ್ಟೇ, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆಯಿಲ್ಲ,” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ದಾಸ್‌ ಹೇಳಿದ್ದಾರೆ.

ರೂ 2000 ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆದ ನಂತರ ಮೊದಲ ಬಾರಿಗೆ ಪತ್ರಕರ್ತರ ಜೊತೆ ಮಾತನಾಡಿದ ಗವರ್ನರ್‌, ಯಾರು ಕೂಡಾ ರೂ 2,000 ನೋಟುಗಳನ್ನು ವಾಪಸ್‌ ನೀಡಲು ಮತ್ತು ಬದಲಾಯಿಸಲು ಅವಸರ ಮಾಡಕೂಡದು ಎಂದಿದ್ದಾರೆ.

“ಈಗ ಅವಸರಿಸಿ ಬ್ಯಾಂಕುಗಳಿಗೆ ಧಾವಿಸುವ ಅಗತ್ಯವಿಲ್ಲ. ಸೆಪ್ಟೆಂಬರ್‌ 30ರ ತನಕ ನಾಲ್ಕು ತಿಂಗಳುಗಳಿವೆ,” ಎಂದು ಹೇಳಿದ ಅವರು ಆರ್‌ಬಿಐ ಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ನೋಟುಗಳನ್ನು ಜನರು ವಾಪಸ್‌ ನೀಡುವಂತೆ ಮಾಡಲು ಗಡುವು ವಿಧಿಸಲಾಗಿದೆ ಎಂದು ಹೇಳಿದರು.

ರೂ 2000 ನೋಟು ಹಿಂಪಡೆದಿರುವುದರಿಂದ ಆರ್ಥಿಕತೆಯ ಮೇಲಿನ ಪರಿಣಾಮ ತುಂಬಾ ಕಡಿಮೆ ಎಂದು ಹೇಳಿದ ಅವರು ಚಲಾವಣೆಯಲ್ಲಿರುವ ಒಟ್ಟು ನೋಟುಗಳಲ್ಲಿ ರೂ 2,000 ನೋಟುಗಳು ಕೇವಲ ಶೇ10.8 ಆಗಿದೆ ಎಂದರು.

ಅಮಾನ್ಯೀಕರಣದ ವೇಳೆ ವಾಪಸ್‌ ಪಡೆದ ನೋಟುಗಳ ಸ್ಥಾನ ತುಂಬಿಸಲೆಂದು ರೂ 2000 ನೋಟು ಚಲಾವಣೆಗೆ ತರಲಾಗಿತ್ತು ಎಂದು ಅವರು ಹೇಳಿದರು.

Similar News