ಕೊಯಂಬತ್ತೂರಿನಲ್ಲಿ ಮತ್ತೆ ʻಬಿರಿಯಾನಿ ಜಿಹಾದ್ʼ ನಕಲಿ ಸುದ್ದಿ ವೈರಲ್‌: ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ

Update: 2023-05-22 12:28 GMT

 ಕೊಯಂಬತ್ತೂರು: ಮುಸ್ಲಿಮರ ಒಡೆತನದ ರೆಸ್ಟೋರೆಂಟ್‌ಗಳು ಬಿರಿಯಾನಿಗೆ ಗರ್ಭನಿರೋಧಕ ಗುಳಿಗೆಗಳನ್ನು ಸೇರಿಸುತ್ತಿವೆ ಹಾಗೂ ಬಿರಿಯಾನಿ ಜಿಹಾದ್‌ ನಡೆಸುತ್ತಿವೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ಪೊಲೀಸರ ಗಮನಕ್ಕೆ ಬಂದ ನಂತರ ರವಿವಾರ ಹಲವಾರು ಟ್ವಿಟ್ಟರ್‌ ಹ್ಯಾಂಡಲ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದುಗಳ ಜನಸಂಖ್ಯೆ ಕಡಿಮೆಗೊಳಿಸಲು ಮುಸ್ಲಿಮರ ರೆಸ್ಟೋರೆಂಟ್‌ಗಳು ಈ ರೀತಿ ಮಾಡುತ್ತಿವೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಅಷ್ಟೇ ಅಲ್ಲದೆ ಈ ರೀತಿ ಮಾಡಿದ್ದಕ್ಕೆ ಮುಸ್ಲಿಂ ರೆಸ್ಟೋರೆಂಟ್‌ ಮಾಲೀಕರುಗಳನ್ನೂ ಬಂಧಿಸಲಾಗಿದೆ, ಈ ರೆಸ್ಟೋರೆಂಟ್‌ಗಳು ಗರ್ಭನಿರೋಧಕ ಗುಳಿಗೆಗಳನ್ನು ಸೇರಿಸಲಾಗಿರುವ ಬಿರಿಯಾನಿಯನ್ನು ಹಿಂದು ಗ್ರಾಹಕರಿಗೆ ಹಾಗೂ ಸಾಮಾನ್ಯ ಬಿರಿಯಾನಿಯನ್ನಯು ಮುಸ್ಲಿಂ ಗ್ರಾಹಕರಿಗೆ ನೀಡುತ್ತಿವೆ ಎಂಬ ಸುದ್ದಿ ಹರಡಿತ್ತು.

ಈ ವೈರಲ್‌ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಕೊಯಂಬತ್ತೂರು ಸಿಟಿ ಸೈಬರ್‌ ಕೈಂ ಪೊಲೀಸರು., ಎಫ್‌ಐಆರ್‌ ದಾಖಲಿಸಲಾಗಿದೆ ಹಾಗೂ ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ ಎಂದಿದ್ದಾರೆ.

ಟ್ವಿಟ್ಟರಿಗರೊಬ್ಬರು ಪೋಸ್ಟ್‌ ಮಾಡಿ “ಕೊಯಂಬತ್ತೂರಿನಲ್ಲಿ ಬಿರಿಯಾನಿ ಜಿಹಾದ್.‌  ಹಿಂದು ಗ್ರಾಃಕರಿಗೆ ನೀಡಲಾದ ಬಿರಿಯಾನಿಯಲ್ಲಿ ಗುಳಿಗೆಗಳಿರುವುದು ಹಾಗೂ ಮುಸ್ಲಿಮರಿಗೆ ನೀಡಿದ ಬಿರಿಯಾನಿ ಸಾಮಾನ್ಯ ಬಿರಿಯಾನಿ ಎಂದು ತಿಳಿದು ಬಂದಿದೆ. ಈ ಔಷಧಿಗಳು ಅದನ್ನು ತಿಂದವರ ಲೈಂಗಿಕ ಸಾಮರ್ಥ್ಯದ  ಮೇಲೆ ಪರಿಣಾಮ ಬೀರುತ್ತವೆ. ಜನಸಂಖ್ಯೆಯಲ್ಲಿ ಬದಲಾವಣೆಗೆ ಈ ಜಿಹಾದ್‌ ನಡೆಸಲಾಗುತ್ತಿದೆ,” ಎಂದು ಬರೆದಿದ್ದರು.

ಆದರೆ ಈ ರೀತಿ ಯಾವುದೇ ಔಷಧಿ ನೀಡಿದರೆ ಅದು ಕೆಲಸ ಮಾಡದು ಹಾಗೂ ಗರ್ಭನಿರೋಧಕ ಗುಳಿಗೆಗಳು ಒಂದು ನಿರ್ದಿಷ್ಟ ಡೋಸೇಜ್‌ನಂತೆ ಸೇವಿಸಿದಾಗ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬುದು ವಾಸ್ತವ,

ಇಂತಹ ಸುದ್ದಿ ಶ್ರೀಲಂಕಾದಲ್ಲಿ 2019ರಲ್ಲಿ ಹಾಗೂ ಚೆನ್ನೈನಲ್ಲಿ ಎಪ್ರಿಲ್‌ 2022ರಲ್ಲಿ ಹರಿದಾಡಿತ್ತು.

Similar News