ಮದ್ಯ ನೀತಿ ಅನುಷ್ಠಾನ ಪ್ರಕರಣ:ಎಎಪಿ ಸಂಸದ ಸಂಜಯ್ ಸಿಂಗ್ ಆಪ್ತರ ನಿವಾಸ, ಕಚೇರಿ ಮೇಲೆ ಈಡಿ ದಾಳಿ

Update: 2023-05-24 05:12 GMT

ಹೊಸದಿಲ್ಲಿ: ದಿಲ್ಲಿಯಲ್ಲಿ  ಈಗ ರದ್ದಾಗಿರುವ  ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ (Sanjay Singh)ಅವರ ಹಲವು ಆಪ್ತರ ಮನೆ-ಕಚೇರಿ  ಮೇಲೆ ಜಾರಿ ನಿರ್ದೇಶನಾಲಯದ (ED) ಬುಧವಾರ ದಾಳಿ ಮಾಡಿದೆ.

ಸಿಂಗ್ ಅವರ ನಿಕಟವರ್ತಿ ಅಜಿತ್ ತ್ಯಾಗಿ ಅವರ ನಿವಾಸಗಳು ಮತ್ತು ಕಚೇರಿಗಳು ಮತ್ತು ಮದ್ಯ ನೀತಿಯಿಂದ ಲಾಭ ಪಡೆದ ಇತರ ಉದ್ಯಮಿಗಳು ಹಾಗೂ  ಗುತ್ತಿಗೆದಾರರು ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ (ED) ಮೂಲಗಳು ತಿಳಿಸಿವೆ.

2020 ರಲ್ಲಿ ಮದ್ಯದಂಗಡಿಗಳು ಹಾಗೂ  ವಿತರಕರಿಗೆ ಪರವಾನಗಿ ನೀಡುವ ದಿಲ್ಲಿ ಸರಕಾರದ  ನಿರ್ಧಾರದಲ್ಲಿ ಸಿಂಗ್ ಮತ್ತು ಅವರ ಸಹಚರರು ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡಿದರು ಹಾಗೂ  ಭ್ರಷ್ಟಾಚಾರ-ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಈ ಪ್ರಕರಣ ದಾಖಾಲಾಗಿತ್ತು.

ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರೂ ಆಗಿರುವ ಸಂಜಯ್  ಸಿಂಗ್ ಅವರು ಯಾವುದೇ ತಪ್ಪನ್ನು ನಿರಾಕರಿಸಿದರು ಹಾಗೂ  ಕೇಂದ್ರ ಸರಕಾರವು ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ  ಸೇರಿದ್ದಾರೆ.

Similar News