ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿದ ಟ್ರಾವಂಕೂರ್ ದೇವಸ್ವಂ ಬೋರ್ಡ್

"ರಾಜಕೀಯ ನಾಯಕರ ಭಾವಚಿತ್ರ ಪ್ರದರ್ಶಿಸುವುದರಿಂದ ದೇವಾಲಯಗಳ ಪರಿಶುದ್ಧತೆ ನಾಶವಾಗುತ್ತದೆ"

Update: 2023-05-24 18:19 GMT

ತಿರುವನಂತಪುರಂ: ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಆಯೋಜಿಸುವ ಸಾಮೂಹಿಕ ಕಸರತ್ತುಗಳು ಮತ್ತು ಸಂಘದ ಇತರ ಚಟುವಟಿಕೆಗಳನ್ನು ನಿರ್ಬಂಧಿಸುವ ಸುತ್ತೋಲೆಯನ್ನು ಟ್ರಾವಂಕೂರ್ ದೇವಸ್ವಂ ಬೋರ್ಡ್ (TDB) ಹೊರಡಿಸಿದೆ ಎಂದು indiatoday.in ವರದಿ ಮಾಡಿದೆ. 

ದಕ್ಷಿಣ ಭಾರತದಲ್ಲಿ ಸುಮಾರು 1,200 ದೇವಾಲಯಗಳನ್ನು  ನಿರ್ವಹಿಸುತ್ತಿರುವ ಟಿಡಿಬಿ, ಕೆಲವು ದೇವಾಲಯಗಳಲ್ಲಿ ರಾಜಕೀಯ ನಾಯಕರ ಫೋಟೋಗಳನ್ನು ಪ್ರದರ್ಶಿಸಲಾಗುತ್ತಿದೆ, ಅಂತಹ ಕ್ರಮಗಳು 'ದೇವಾಲಯಗಳ ಶುದ್ಧತೆಯನ್ನು ನಾಶಮಾಡಿದೆ' ಎಂದು ಹೇಳಿದೆ.

“ಹಲವು ದೇವಸ್ಥಾನಗಳಲ್ಲಿ ಆರೆಸ್ಸೆಸ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ, ಅವರು ಕಸರತ್ತು ನಡೆಸುತ್ತಿದ್ದಾರೆ, ಸಂಘದ ಚಟುವಟಿಕೆಗಳು ನಡೆಯುತ್ತಿವೆ. ಅದಕ್ಕಾಗಿಯೇ ಇಂತಹ ಸುತ್ತೋಲೆ ಹೊರಡಿಸಲಾಗಿದೆ. ದೇವಸ್ಥಾನಗಳು ಭಕ್ತರಿಗೆ ಇರುವಂತಹದ್ದು, ಭಕ್ತರಿಗೆ ಪೂಜೆಗೆ ಯಾವುದೇ ತೊಂದರೆಯಾಗಬಾರದು. ಇದು ದೇವಸ್ವಂ ಮಂಡಳಿಯ ನಿಲುವು.  ಅಧಿಕಾರಿಗಳ ಗಮನಕ್ಕೆ ತರಲು ಸುತ್ತೋಲೆಯನ್ನು ಮರು ಹೊರಡಿಸಲಾಗಿದೆ." ಎಂದು ಟಿಡಿಬಿ ಅಧ್ಯಕ್ಷ ಅನಂತಗೋಪನ್ ಹೇಳಿದ್ದಾರೆ.

Similar News