ಬೋಧಕರ ನೇಮಕಾತಿ ಮತ್ತು ಪಿಎಚ್‌ಡಿಗಳ ನೀಡಿಕೆಯ ಮೇಲ್ವಿಚಾರಣೆಗೆ ಸಮಿತಿ ರಚಿಸಲಿರುವ ಯುಜಿಸಿ

Update: 2023-05-24 17:36 GMT

ಹೊಸದಿಲ್ಲಿ,ಮೇ 24: ನಿಯಮಾವಳಿಗಳ ಉಲ್ಲಂಘನೆಯನ್ನು ತಡೆಗಟ್ಟುವ ಪ್ರಯತ್ನವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರ ನೇಮಕಾತಿಗಳು ಮತ್ತು ಪಿಎಚ್‌ಡಿ ಪದವಿಗಳ ನೀಡಿಕೆಯ ನಿಯತಕಾಲಿಕ ವೌಲ್ಯಮಾಪನ ಮಾಡಲು ಸಮಿತಿಯೊಂದನ್ನು ರಚಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು ನಿರ್ಧರಿಸಿದೆ.

ಉನ್ನತ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯು ನಿಯಮಿತವಾಗಿ ಸಭೆಗಳನ್ನು ನಡೆಸಲಿದೆ ಹಾಗೂ ಕೆಲವು ಶಿಕ್ಷಣ ಸಂಸ್ಥೆಗಳನ್ನು ಆಯ್ದುಕೊಂಡು ಬೋಧಕರ ನೇಮಕಾತಿಗಳು ಮತ್ತು ಪಿಎಚ್‌ಡಿಗಳ ನೀಡಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲಿದೆ. ಪ್ರಕ್ರಿಯೆಗಳು ಯುಜಿಸಿ ನಿಯಮಗಳಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ದಾಖಲೆಗಳನ್ನು ಪರಿಶೀಲಿಸಲಿದೆ ಮತ್ತು ಉಲ್ಲಂಘನೆಗಳ ಪ್ರಕರಣದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೀಶಕುಮಾರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಎ.24ರಂದು ನಡೆದಿದ್ದ ತನ್ನ 568ನೇ ಸಭೆಯಲ್ಲಿ ಯುಜಿಸಿ ಈ ನಿರ್ಧಾರವನ್ನು ಕೈಗೊಂಡಿದೆ. ವರ್ಷಗಳಿಂದಲೂ ನೇಮಕಾತಿ ನಿಯಮಗಳ ಉಲ್ಲಂಘನೆಗಳು ನಡೆದಿರುವುದನ್ನು ಮತ್ತು ನಿಯಂತ್ರಣ ಸಂಸ್ಥೆಗಳು ಹಲವಾರು ದೂರುಗಳನ್ನು ಸ್ವೀಕರಿಸಿದ್ದನ್ನು ಸಭೆಯು ತನ್ನ ಗಮನಕ್ಕೆ ತೆಗೆದುಕೊಂಡಿತ್ತು.

Similar News