ರಾಮನಗರ: ಟೋಲ್ ವಿಚಾರಕ್ಕೆ ನಡೆದ ಜಗಳ ಸಿಬ್ಬಂದಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಜೂ.5: ಟೋಲ್ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಯುವಕರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ನಡೆದಿದೆ.
ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ಟೋಲ್ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಮಾರಾಮಾರಿಯಾಗಿತ್ತು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಯುವಕರು ಟೋಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪವನ್‍ಕುಮಾರ್(26) ಎಂಬಾತನನ್ನು ಕೊಲೆ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕರಿಕಲ್ ತಾಂಡ್ಯ ನಿವಾಸಿ ಪವನ್‍ಕುಮಾರ್ ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಟೋಲ್‍ನಿಂದ ಹಿಂಬಾಲಿಸಿಕೊಂಡು ಬಂದು ಆತನನ್ನು ಕೊಲೆ ಮಾಡಲಾಗಿದೆ. ಜೂ.4ರ ರಾತ್ರಿ 10 ಗಂಟೆ ಸುಮಾರಿಗೆ ಟೋಲ್ ಬಳಿ ಗಲಾಟೆ ನಡೆದಿತ್ತು. ಬಳಿಕ ಅದೇ ರಾತ್ರಿ 12 ಗಂಟೆಗೆ ಕೆಲಸ ಮುಗಿಸಿಕೊಂಡು ಊಟಕ್ಕೆಂದು ಪವನ್ ಹೊರಟ್ಟಿದ್ದ. ಈ ವೇಳೆ ಪವನ್‍ನನ್ನು ಹಿಂಬಾಲಿಸಿದ ಯುವಕರು ಆತನ ಮೇಲೆ ಹಾಕಿ ಸ್ಟಿಕ್‍ನಿಂದ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಬಿಡದಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ.