ಬೈಪರ್‌ಜಾಯ್ ಚಂಡಮಾರುತ ಮತ್ತಷ್ಟು ಬಿರುಸು: ಜೂನ್ 15ರಂದು ಗುಜರಾತ್ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ

Update: 2023-06-11 06:21 GMT

ಹೊಸದಿಲ್ಲಿ: ಪೂರ್ವ-ಕೇಂದ್ರ ಅರೇಬಿಯನ್ ಸಮುದ್ರದಲ್ಲಿ ಕೇಂದ್ರೀಕೃತಗೊಂಡಿರುವ ಪ್ರಚಂಡ ಬೈಪರ್‌ಜಾಯ್ ಚಂಡಮಾರುತವು ಪ್ರತಿ ಗಂಟೆಗೆ ಐದು ಕಿಮೀ ವೇಗದಲ್ಲಿ ಉತ್ತರ ದಿಕ್ಕಿನೆಡೆಗೆ ಚಲಿಸುತ್ತಿದ್ದು, ಮುಂದಿನ ಆರು ಗಂಟೆಯ ಅವಧಿಯಲ್ಲಿ ಈ ಚಂಡಮಾರುತವು ಮತ್ತಷ್ಟು ಬಿರುಸಾಗುವ ಸಾಧ್ಯತೆ ಇದೆ ಎಂದು ರವಿವಾರ ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ ಎಂದು ndtv.com ವರದಿ ಮಾಡಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೈಪರ್‌ಜಾಯ್ ಚಂಡಮಾರುತವು ಬಹುತೇಕ ಉತ್ತರ ದಿಕ್ಕಿನತ್ತ ಚಲಿಸಿ ಪಾಕಿಸ್ತಾನದ ಹತ್ತಿರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸೌರಾಷ್ಟ್ರ ಹಾಗೂ ಕಛ್ ಕರಾವಳಿ ಪ್ರದೇಶಗಳಿಗೆ ಜೂನ್ 15ರಂದು ಬಿರುಸಾಗಿ ಅಪ್ಪಳಿಸಲಿದೆ ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, "ಭಾರಿ ಪ್ರಚಂಡ ಬೈಪರ್‌ಜಾಯ್ ಚಂಡಮಾರುತವು ಇಂದು 23.30ರ ಭಾರತೀಯ ಕಾಲಮಾನದಲ್ಲಿ ಮುಂಬೈನ ಪೂರ್ವ-ನೈಋತ್ಯ ದಿಕ್ಕಿನಿಂದ 600 ಕಿಮೀ ದೂರದ ಉತ್ತರ ದಿಕ್ಕಿನ 17.4 ಡಿಗ್ರಿ ಅಕ್ಷಾಂಶ ಹಾಗೂ ಪೂರ್ವ ದಿಕ್ಕಿನ 67.3 ಡಿಗ್ರಿ ರೇಖಾಂಶ, ಪೋರಬಂದರ್‌ನ ದಕ್ಷಿಣ-ನೈಋತ್ಯ ದಿಕ್ಕಿನಿಂದ 530 ದೂರ ಹಾಗೂ ಕರಾಚಿಯ ದಕ್ಷಿಣ ದಿಕ್ಕಿನಿಂದ 830 ಕಿಮೀ ದೂರದಲ್ಲಿ ಕೇಂದ್ರೀಕೃತಗೊಂಡಿದೆ. ಈ ಚಂಡಮಾರುತವು ಮತ್ತಷ್ಟು ಬಿರುಸಾಗಲಿದ್ದು, ಪಾಕಿಸ್ತಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸೌರಾಷ್ಟ್ರ ಮತ್ತು ಕಛ್ ಕರಾವಳಿ ಪ್ರದೇಶಗಳನ್ನು ಜೂನ್ 15ರ ಮಧ್ಯಾಹ್ನದ ಹೊತ್ತಿಗೆ ಭಾರಿ ಪ್ರಚಂಡ ಚಂಡಮಾರುತವಾಗಿ ಅಪ್ಪಳಿಸಲಿದೆ" ಎಂದು ಮಾಹಿತಿ ನೀಡಿದೆ.

ಈ ಕುರಿತು ವಾರ್ತಾಪತ್ರವನ್ನೂ ಬಿಡುಗಡೆ ಮಾಡಿರುವ ಭಾರತೀಯ ಹವಾಮಾನ ಇಲಾಖೆಯು, "ಪೂರ್ವ-ಕೇಂದ್ರ ಅರೇಬಿಯನ್ ಸಮುದ್ರದಲ್ಲಿ ಕೇಂದ್ರೀಕೃತವಾಗಿರುವ ಭಾರಿ ಪ್ರಚಂಡ ಚಂಡಮಾರುತವಾದ ಬೈಪರ್‌ಜಾಯ್ (ಬಿಪೋರ್‌ಜಾಯ್ ಎಂದು ಉಚ್ಚರಿಸಲ್ಪಡುವ) ಈ ಮುನ್ನ ಪ್ರತಿ ಗಂಟೆಗೆ ಐದು ಕಿಮೀ ವೇಗದಲ್ಲಿ ಉತ್ತರ ದಿಕ್ಕಿನತ್ತ ಚಲಿಸುತ್ತಿತ್ತು. ಆರು ಗಂಟೆಗಳ ನಂತರ ಜೂನ್ 10ರ ಭಾರತೀಯ ಕಾಲಮಾನ 23.30ರಲ್ಲಿ ಉತ್ತರ ದಿಕ್ಕಿನ 17.4 ಡಿಗ್ರಿ ಅಕ್ಷಾಂಶ ಹಾಗೂ ಪೂರ್ವ ದಿಕ್ಕಿನ 67.3 ಡಿಗ್ರಿ ರೇಖಾಂಶದಲ್ಲಿ, ಮುಂಬೈನ ದಕ್ಷಿಣ-ನೈಋತ್ಯ ದಿಕ್ಕಿನಿಂದ ಸುಮಾರು 600 ಕಿಮೀ ದೂರ, ಪೋರಬಂದರ್‌ನ ದಕ್ಷಿಣ-ನೈಋತ್ಯ ದಿಕ್ಕಿನಿಂದ 530 ಕಿಮೀ ದೂರ, ದ್ವಾರಕಾದ ದಕ್ಷಿಣ-ನೈಋತ್ಯ ದಿಕ್ಕಿನಿಂದ 580 ಕಿಮೀ ದೂರ, ನಲಿಯಾದ ದಕ್ಷಿಣ-ನೈಋತ್ಯ ದಿಕ್ಕಿನಿಂದ 670 ಕಿಮೀ ದೂರ ಹಾಗೂ ದಕ್ಷಿಣ ಕರಾಚಿಯಿಂದ 830 ಕಿಮೀ ದೂರದಲ್ಲಿ ಸ್ಥಿರವಾಗಿದೆ" ಎಂದು ಹೇಳಿದೆ.

"ಮುಂದಿನ ಆರು ಗಂಟೆಗಳ ಅವಧಿಯಲ್ಲಿ ಇದು ಭಾರಿ ಪ್ರಚಂಡ ಚಂಡಮಾರುತವಾಗಿ ರೂಪಾಂತರವಾಗುವ ಸಾಧ್ಯತೆ ಇದೆ. ಈ ಚಂಡಮಾರುತವು ಬಹುತೇಕ ಉತ್ತರ ದಿಕ್ಕಿನೆಡೆಗೆ ಚಲಿಸಲಿದೆ ಮತ್ತು ಪಾಕಿಸ್ತಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸೌರಾಷ್ಟ್ರ ಮತ್ತು ಕಛ್ ಕರಾವಳಿ ಪ್ರದೇಶಗಳನ್ನು ಜೂನ್ 15, 2023ರ ಮಧ್ಯಾಹ್ನದಂದು ಭಾರಿ ಪ್ರಚಂಡ ಚಂಡಮಾರುತವಾಗಿ ಅಪ್ಪಳಿಸಲಿದೆ" ಎಂದೂ ತಿಳಿಸಿದೆ.

Similar News