ಕ್ಯಾನ್ಸರ್‌ನೊಂದಿಗಿನ ಹೋರಾಟದಲ್ಲಿ ಕೊನೆಯುಸಿರೆಳೆದ ನಟ-ನಿರ್ದೇಶಕ ಮಂಗಲ್ ಧಿಲ್ಲೋನ್

Update: 2023-06-11 08:31 GMT

ಲೂಧಿಯಾನಾ: ಕ್ಯಾನ್ಸರ್‌ನೊಂದಿಗಿನ ದೀರ್ಘ ಹೋರಾಟದ ನಂತರ ಹಿರಿಯ ಪಂಜಾಬಿ ಹಾಗೂ ಹಿಂದಿ ನಟ ಮತ್ತು ನಿರ್ದೇಶಕ ಮಂಗಲ್ ಧಿಲ್ಲೋನ್ ಕೊನೆಯುಸಿರೆಳೆದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ  ಲೂಧಿಯಾನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 18ರಂದು ತಮ್ಮ ಜನ್ಮ ದಿನ ಆಚರಿಸಿಕೊಳ್ಳಲು ಕೇವಲ ಒಂದು ವಾರ ಬಾಕಿ ಇರುವಾಗಲೇ ಮಂಗಲ್ ಧಿಲ್ಲೋನ್ ನಿರ್ಗಮಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಸಿಖ್ ಕುಟುಂಬವೊಂದರಲ್ಲಿ ಮಂಗಲ್ ಧಿಲ್ಲೋನ್ ಜನಿಸಿದ್ದರು. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಂಜ್ ಗ್ರಾಯಿನ್ ಕಾಲನ್ ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದರು. ನಂತರ ಅವರು ತಮ್ಮ ತಂದೆಯ ತೋಟದ ಮನೆಯಿರುವ ಉತ್ತರ ಪ್ರದೇಶಕ್ಕೆ ವಾಸ್ತವ್ಯ ಬದಲಿಸಿದ್ದರು. ನಂತರ ಲಖೀಂಪುರ್ ಖೇರಿ ಜಿಲ್ಲೆಯ ನಿಘಾಸನ್‌ನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ತಮ್ಮ ಪದವಿ ಪೂರೈಸಿದ್ದರು.

ನಂತರ ಮಂಗಲ್ ಧಿಲ್ಲೋನ್ ದಿಲ್ಲಿಯ ರಂಗಭೂಮಿಯಲ್ಲೂ ಕೆಲಸ ನಿರ್ವಹಿಸಿದ್ದರು. ಅವರು 1980ರಲ್ಲಿ ನಟನೆಯಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾವನ್ನು ಪೂರೈಸಿದ್ದರು. 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ 'ಕಥಾಸಾಗರ್' ಧಾರಾವಾಹಿಯ ಮೂಲಕ ಅವರು ಮನೋರಂಜನಾ ಉದ್ಯಮಕ್ಕೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಅವರು 'ಬುನಿಯಾದ್' ಎಂಬ ಮತ್ತೊಂದು ದೂರದರ್ಶನ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. 'ಜುನೂನ್', 'ಕಿಸ್ಮತ್', 'ದಿ ಗ್ರೇಟ್ ಮರಾಠಾ', 'ಪ್ಯಾಂಥರ್', 'ಘುಟಾನ್', 'ಸಾಹಿಲ್', 'ಮೌಲಾನಾ ಆಝಾದ್', 'ಮುಜ್ರಿಮ್ ಹಾಝಿರ್', 'ರಿಷ್ತಾ', 'ಯುಗ್' ಹಾಗೂ 'ನೂರ್ ಜಹಾನ್' ಸೇರಿದಂತೆ ಮತ್ತೆ ಹಲವು ಧಾರಾವಾಹಿಗಳು ಅವರ ಹೆಸರಿಗೆ ಜಮೆಯಾಗಿದ್ದವು.

ಮಂಗಲ್ ಧಿಲ್ಲೋನ್ ಅವರು 'ಖೂನ್ ಭರಿ ಮಾಂಗ್', 'ಝಕ್ಮಿ ಔರಾತ್', 'ದಯಾವನ್', 'ಕಹಾಂ ಹೈಂ ಕಾನೂನ್', ' ನಾಕಾ ಬಂದಿ', 'ಅಂಬಾ', 'ಅಕೇಲಾ', 'ಜನಶೀನ್', 'ಟ್ರೈನ್ ಟು ಪಾಕಿಸ್ತಾನ್', 'ದಲಾಲ್' ಸೇರಿದಂತೆ ಹಲವಾರು ಚಲನಚಿತ್ರಗಳಲ್ಲೂ ನಟಿಸಿದ್ದರು. ಅವರು 2017ರಲ್ಲಿ ಬಿಡುಗಡೆಯಾಗಿದ್ದ 'ತೂಫಾನ್ ಸಿಂಗ್'ನಲ್ಲಿ ಲಖಾ ಪಾತ್ರದಲ್ಲಿ ನಟಿಸಿದ್ದು ಅವರ ಕೊನೆಯ ಚಿತ್ರವಾಗಿತ್ತು.

Similar News