ಕರ್ನಾಟಕದಲ್ಲಿ ಎದುರಿಸಿದ ಸೋಲಿನಿಂದಾಗಿ‌ ಬಿಜೆಪಿ ಲೋಕಸಭೆಗೆ ಅವಧಿಪೂರ್ವ ಚುನಾವಣೆ ಘೋಷಿಸಲಿದೆ: ಎಂ.ಕೆ. ಸ್ಟಾಲಿನ್

Update: 2023-06-11 11:13 GMT

ಚೆನ್ನೈ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಅವಧಿಪೂರ್ವ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

ಸೇಲಂನಲ್ಲಿ ಡಿಎಂಕೆ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, 2004-14ರ ಅವಧಿಯಲ್ಲಿ ಡಿಎಂಕೆ ಪಕ್ಷವು ಕೇಂದ್ರ ಸರ್ಕಾರದ ಭಾಗವಾಗಿದ್ದಾಗ,  ರಾಜ್ಯದಲ್ಲಿ 16,600 ಕೋಟಿ ರೂ.ಗಳ ಮೆಟ್ರೋ ರೈಲು ಯೋಜನೆ, 56,664 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳು ಮತ್ತು ಸೇತುಸಮುದ್ರಂ ಯೋಜನೆಗಳಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆವು ಎಂದು ಸ್ಟಾಲಿನ್ ಹೇಳಿದ್ದಾರೆ.

2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕಳೆದ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿಗೆ ಬಿಜೆಪಿ ಏನು ಮಾಡಿದೆ ಎಂದು ಗೃಹಸಚಿವ ಅಮಿತ್‌ ಶಾ ಅವರನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂಬತ್ತು ವರ್ಷ ಪೂರ್ಣಾವಾಗುತ್ತಿರುವ ಹಿನ್ನೆಲೆಯಲ್ಲಿ ಅಮಿತ್‌ ಶಾ ತಮಿಳುನಾಡು ಪ್ರವಾಸದಲ್ಲಿದ್ದಾರೆ. 

ಅಮಿತ್ ಶಾ ಶನಿವಾರ ರಾತ್ರಿ ತಮಿಳುನಾಡಿಗೆ ಆಗಮಿಸಿದ್ದು, ವೆಲ್ಲೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳನ್ನೂ ಶಾ ಭೇಟಿಯಾಗಲಿದ್ದಾರೆ.

ಈ ನಡುವೆ, ಲೋಕಸಭೆ ಚುನಾವಣೆಗೆ ಸಿದ್ಧರಾಗಿರಿ ಎಂದು ಡಿಎಂಕೆ ಕಾರ್ಯಕರ್ತರಿಗೆ ಕರೆ ನೀಡಿದ ಸ್ಟಾಲಿನ್, ಯಾವುದೇ ರಾಜಕೀಯ ಪಕ್ಷವು ಡಿಎಂಕೆಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ ಸ್ಥಾನಗಳನ್ನು ಗೆಲ್ಲಲು ಶ್ರಮಿಸಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಎಐಎಡಿಎಂಕೆ ಜೊತೆಗಿನ ರಾಜಕೀಯ ಮೈತ್ರಿ ಹೊಂದಿರುವ ಬಿಜೆಪಿ ತಮಿಳುನಾಡಿನಲ್ಲಿ ಕನಿಷ್ಟ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.

Similar News