ಒಡಿಶಾ ರೈಲು ದುರಂತಕ್ಕೆ ‘ಮಾನವಹಸ್ತಕ್ಷೇಪ’ಕಾರಣ?: ಮಾಜಿ ಎನ್ಐಎ, ರಾ ವರಿಷ್ಠರು ಸಹಿತ 270 ಗಣ್ಯರಿಂದ ಪ್ರಧಾನಿಗೆ ಪತ್ರ

Update: 2023-06-11 16:47 GMT

ಹೊಸದಿಲ್ಲಿ: ಒಡಿಶಾ ರೈಲು ದುರಂತ ಹಾಗೂ ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಪ್ರಗತಿಯನ್ನು  ದುರ್ಬಲಗೊಳಿಸಲು ನಡೆಯುತ್ತಿದೆಯೆನ್ನಲಾದ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ನಿವೃತ್ತ ನ್ಯಾಯಾಧೀಶರು, ನಿವೃತ್ತ ಉನ್ನತ ಅಧಿಕಾರಿಗಳು, ಮಾಜಿ ರಾಯಭಾರಿಗಳು, ಭಾರತೀಯ ಬೇಹುಗಾರಿಕಾ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ, ಮಾಜಿ ಎನ್ಐಎ ನಿರ್ದೇಶಕ ಹಾಗೂ ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ 270 ಪ್ರಮುಖ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ರವಿವಾರ ಪತ್ರ ಬರೆದಿದ್ದಾರೆ.

ಒಡಿಶಾದಲ್ಲಿ 288 ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡ ತ್ರಿವಳಿ ರೈಲುದುರಂತವು  ಉದ್ದೇಶಪೂರ್ವಕವಾಗಿ ನಡೆಸಲಾದ ‘ಮಾನವ ಹಸ್ತಕ್ಷೇಪ’ದಿಂದಾಗಿ ಸಂಭವಿಸಿದೆ ಹಾಗೂ  ಅದು ಉಗ್ರಗಾಮಿ ಸಂಘಟನೆಗಳ ಕುಮ್ಮಕ್ಕಿನಿಂದಾಗಿ ನಡೆದ ವಿಧ್ವಂಸಕ ಕೃತ್ಯವಾಗಿರಬಹುದು ಎಂದು  ಪ್ರಧಾನಿಗೆ ಬರೆದ ಪತ್ರದಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.

‘‘ ನಮ್ಮಲ್ಲಿ ಕೆಲವರು ಜಮ್ಮುಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದು, ಅಲ್ಲಿ ರೈಲ್ವೆ ಜಾಲಗಳ ಮೇಲೆ ವಿಧ್ವಂಸಕಕೃತ್ಯಗಳು ನಡೆದಿರುವಂತಹ ಸನ್ನಿವೇಶಗಳನ್ನು ಎದುರಿಸಿದ್ದೇವೆ. ರೈಲ್ವೆ ಜಾಲಗಳಿಗೆ ಹಾನಿ ಮಾಡಲು ಹಾಗೂ ಎಂಟು ಭೀಕರ ಅವಘಡಗನ್ನು ನಡೆಸುವ ಉಗ್ರರ ಪ್ರಯತ್ನಗಳು ಸಮರ್ಪಕ ಭದ್ರತಾ ನಿಯೋಜನೆಗಳನ್ನು ಮಾಡಿದ್ದರಿಂದ ವಿಫಲವಾಗಿದ್ದವು ಎಂದವರು ನೆನಪಿಸಿದ್ದಾರೆ.ಜಮ್ಮುವಿನಲ್ಲಿ 1990 ಹಾಗೂ 2000ನೇ ಇಸವಿಯ ಆರಂಭದಲ್ಲಿ ಕೆಲವು ರೈಲ್ವೆ ಹಳಿಗಳಿಗೆ ಹಾನಿಯುಂಟು ಮಾಡಿದ ಕೆಲವು ಘಟನೆಗಳನ್ನು  ಕೂಡಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತೀಯ ರೈಲ್ವೆಯು ಸರಕುಗಳು ಹಾಗೂ ಮಾನವರ ಸಾಗಣೆಯ ಜೀವಜಾಲವಾಗಿದೆ ಎಂದು ಬಣ್ಣಿಸಿದ ಅವರು ದೇಶದ ಪ್ರಗತಿಯನ್ನು ಸಹಿಸದಕೆಲವು ಶಕ್ತಿಗಳು ರೈಲ್ವೆ ಜಾಲಗಳಿಗೆ ಹಾನಿಯುಂಟು ಮಾಡಲು ಹಾಗೂ ಭೀಕರ ಮಾನವ ದುರಂತವನ್ನು ಸೃಷ್ಟಿಸಲು ಬಯಸುತ್ತಿವೆ ಎಂದು ಪತ್ರವು ಹೇಳಿದೆ.

ತಥಾಕಥಿತ ಚಿಕನ್ ನೆಕ್ ಪ್ರದೇಶ (ಪ.ಬಂಗಾಳದ ಸಿಲಿಗುರಿ ನಗರದ ಸುತ್ತಲಿನ 20-22 ಕಿ.ಮೀ.ಪ್ರದೇಶವಾಗಿದ್ದು, ಭಾರತದ ಮುಖ್ಯಭೂಮಿಯೊಂದಿಗೆ ಈಶಾನ್ಯದ ಎಂಟು ರಾಜ್ಯಗಳನ್ನು ಸಂಪರ್ಕಿಸುತ್ತದೆ) ಸೇರಿದಂತೆ ಪೂರ್ವ ಹಾಗೂ ಈಶಾನ್ಯರಾಜ್ಯಗಳಲ್ಲಿ ಇಡೀ ರೈಲ್ವೆ ಜಾಲವು ದಾಳಿಗೆ ಸುಲಭದಲ್ಲಿ ತುತ್ತಾಗುವಂತಹ ಸ್ಥಿತಿಯಲ್ಲಿದೆ. ಅಕ್ರಮವಲಸಿಗರು ಸೇರಿದಂತೆ ರೈಲ್ವೆ ಹಳಿಗಳಲ್ಲಿ ಅಕ್ರಮವಾಗಿ ಅಲೆದಾಡುವವರನ್ನು  ತೆರವುಗೊಳಿಸಬೇಕು ಹಾಗೂ ನಮ್ಮ ರೈಲು ಹಳಿಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದವರು ಹೇಳಿದರು.

ರಾಜಸ್ತಾನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅನಿಲ್ ದಿಯೋ ಸಿಂಗ್, ಗುಜರಾತ್ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಎಸ್.ಎಂ. ಸೋನಿ, ಉತ್ತರಪ್ರದೇಶದ ಮಾಜಿ ಡಿಜಿಪಿ ವಿಕ್ರಂ ಸಿಂಗ್, ಮಹಾರಾಷ್ಟ್ರದ ಮಾಜಿ ಡಿಜಿಪಿ ಪ್ರವೀಣ್ ದೀಕ್ಷಿತ್ ಮತ್ತಿತರರು ಪತ್ರಕ್ಕೆ ಸಹಿಹಾಕಿದವರಲ್ಲಿ ಸೇರಿದ್ದಾರೆ.

Similar News