ಉತ್ತರಕಾಶಿ: ಎಚ್ಚರಿಕೆಯ ಭಿತ್ತಿಪತ್ರಗಳ ಬೆನ್ನಲ್ಲೇ ಅಲ್ಪಸಂಖ್ಯಾತ ಸಮುದಾಯದ ಅಂಗಡಿ ಮಾಲಕರಿಗೆ ಬೆದರಿಕೆ ಕರೆ

Update: 2023-06-12 06:59 GMT

ಡೆಹ್ರಾಡೂನ್: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಂಗಡಿಗಳ ಮಾಲಕರು ತಕ್ಷಣ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸದಿದ್ದರೆ ತೀವ್ರ ಪರಿಣಾಮ ಎದುರಿಸಲು ಸಜ್ಜಾಗಿ ಎಂಬ ಬೆದರಿಕೆಯೊಡ್ಡುವ ಭಿತ್ತಿಪತ್ರಗಳು ಕಾಣಿಸಿಕೊಂಡ ಬೆನ್ನಲ್ಲೇ, ಉತ್ತರಕಾಶಿಯ ಪುರೋಲಾದಲ್ಲಿ ಕೆಲ ಅಂಗಡಿ ಮಾಲಕರಿಗೆ ಬೆದರಿಕೆ ಕರೆಗಳು ಕೂಡಾ ಬಂದಿವೆ ಎಂದು timesofindia ವರದಿ ಮಾಡಿದೆ.

"ತಕ್ಷಣ ಪಟ್ಟಣವನ್ನು ತೊರೆಯದಿದ್ದರೆ ನಿಮ್ಮನ್ನು ಗುರುತಿಸಿ, ದಾಳಿಗೆ ಗುರಿ ಮಾಡಲಾಗುವುದು" ಎಂಬ ಬೆದರಿಕೆ ಕರೆಗಳು ಬಂದಿರುವುದಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲ ಸದಸ್ಯರು ಹೇಳಿದ್ದಾರೆ.

ಮೇ 26ರಂದು ಅಪ್ರಾಪ್ತ ವಯಸ್ಸಿನ ಹಿಂದೂ ಯುವತಿಯ ಅಪಹರಣ ಪ್ರಕರಣದಲ್ಲಿ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆ ತಲೆದೋರಿದೆ.

ಘಟನೆಯ ಬಳಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 30 ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಆ ಬಳಿಕ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಯೊಬ್ಬರು ಸೇರಿದಂತೆ ಹಲವು ವರ್ಷಗಳಿಂದ ಅಲ್ಲಿ ವ್ಯವಹಾರ ನಡೆಸುತ್ತಿದ್ದ ಕನಿಷ್ಠ 10 ಮಂದಿ ಅಂಗಡಿ ಮಾಲಕರು ಪಟ್ಟಣ ತೊರೆದಿದ್ದಾರೆ.

"ನಮ್ಮ ಭವಿಷ್ಯದ ಬಗ್ಗೆ ನಾವು ಚಿಂತಿತರಾಗಿದ್ದೇವೆ. 'ಲವ್ ಜಿಹಾದ್' ವಿಷಯದ ಬಗ್ಗೆ ಚರ್ಚಿಸಲು ವಿವಿಧ ಸಂಘಟನೆಗಳು ಜೂನ್ 15ರಂದು ಮಹಾಪಂಚಾಯತ್ ಆಯೋಜಿಸಿವೆ" ಎಂದು ಪಟ್ಟಣದಲ್ಲೇ ಉಳಿದಿರುವ ಕೆಲ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

"ಬಲಪಂಥೀಯ ಸಂಘಟನೆಗಳಿಗೆ ಸೇರಿದ ಕೆಲ ವ್ಯಕ್ತಿಗಳು ನೇರವಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದರೆ, ಮತ್ತೆ ಕೆಲವರು ಹಲವು ವರ್ಷಗಳಿಂದ ನಮಗೆ ಪರಿಚಿತರಾಗಿರುವವರ ಮೂಲಕ ಕರೆ ಮಾಡಿಸಿದ್ದಾರೆ" ಎಂದು ಬಹಿರಂಗಪಡಿಸಿದ್ದಾರೆ.

"ಕೆಲ ವ್ಯಕ್ತಿಗಳು ಕರೆ ಮಾಡಿ, ಅಂಗಡಿಗಳನ್ನು ತೆರೆದರೆ ಅವುಗಳಿಗೆ ಬೆಂಕಿ ಇಟ್ಟು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪಟ್ಟಣ ತೊರೆದರೆ ಎಲ್ಲಿಗೆ ಹೋಗಬೇಕು ಎನ್ನುವುದು ನಮಗೆ ತಿಳಿಯುತ್ತಿಲ್ಲ.. ಹಲವು ದಶಕಗಳಿಂದ ನಾವು ಇಲ್ಲಿ ಇದ್ದೇವೆ" ಎಂದು ಹೇಳಿದ್ದಾರೆ.

Similar News