ದೇಶ ಬಿಡುವಂತೆ ಬೀಜಿಂಗ್ ನಲ್ಲಿರುವ ಕೊನೆಯ ಭಾರತೀಯ ವರದಿಗಾರನಿಗೆ ಚೀನಾ ಸೂಚನೆ

Update: 2023-06-12 15:59 GMT

ಹೊಸದಿಲ್ಲಿ: ದೇಶ ತೊರೆಯುವಂತೆ ಬೀಜಿಂಗ್ನಲ್ಲಿರುವ ಕೊನೆಯ ಭಾರತೀಯ ವರದಿಗಾರನಿಗೆ ಚೀನಾ ಸೂಚಿಸಿದೆ ಎಂದು ‘ಬ್ಲೂಮ್ಬರ್ಗ್’ ಸೋಮವಾರ ವರದಿ ಮಾಡಿದೆ. ಈ ವರದಿಗಾರ ಪಿಟಿಐ ಸುದ್ದಿ ಸಂಸ್ಥೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತೀಯ ಮಾಧ್ಯಮ ಸಂಸ್ಥೆಗಳ ನಾಲ್ವರು ವರದಿಗಾರರು ಚೀನಾದಲ್ಲಿದ್ದರು. ಆದರೆ, ಎಪ್ರಿಲ್ ನಲ್ಲಿ, ಸರಕಾರಿ ಒಡೆತನದ ಪ್ರಸಾರ ಭಾರತಿಯ ವರದಿಗಾರ ಅಂಶುಮಾನ್ ಮಿಶ್ರಾ ಮತ್ತು ‘ದ ಹಿಂದೂ’ ಪತ್ರಿಕೆಯ ವರದಿಗಾರ ಅನಂತ್ ಕೃಷ್ಣನ್ ಚೀನಾಕ್ಕೆ ವಾಪಸಾಗುವುದನ್ನು ತಡೆಯಿತು. ಅವರಿಬ್ಬರೂ ಚೀನಾ ಬಗ್ಗೆ ವರದಿ ಮಾಡುತ್ತಿದ್ದರು. ಆದರೆ, ಅವರ ವೀಸಾಗಳನ್ನು ಸ್ಥಗಿತಗೊಳಿಸುವಾಗ ಅವರಿಬ್ಬರೂ ಭಾರತದಲ್ಲಿದ್ದರು.

ಕಳೆದ ವಾರಾಂತ್ಯದಲ್ಲಿ, ‘ಹಿಂದೂಸ್ತಾನ್ ಟೈಮ್ಸ್’ ವರದಿಗಾರ ಸುತೀರ್ತೊ ಪತ್ರಾನೊಬಿಸ್ರಿಗೂ ಚೀನಾ ತೊರೆಯುವಂತೆ ಸೂಚಿಸಲಾಗಿದೆ ಎಂದು ಆ ಪತ್ರಿಕೆ ವರದಿ ಮಾಡಿದೆ.

ಭಾರತ ಮತ್ತು ಚೀನಾ ದೇಶಗಳ ನಡುವಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಭಾರತದಲ್ಲಿರುವ ಚೀನಾ ಪತ್ರಕರ್ತರನ್ನು ತುಂಬಾ ಸಮಯದಿಂದ ‘‘ಅನುಚಿತವಾಗಿ ಮತ್ತು ತಾರತಮ್ಯ ಧೋರಣೆಯಿಂದ’’ ಕಾಣುತ್ತಿರುವುದಕ್ಕೆ ಪ್ರತಿಯಾಗಿ ಭಾರತೀಯ ವರದಿಗಾರರ ವಿರುದ್ಧ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಳೆದ ತಿಂಗಳು ಚೀನಾದ ವಿದೇಶ ಸಚಿವಾಲಯದ ವಕ್ತಾರ ಮಾವೊ ನಿಂಗ್ ಹೇಳಿದ್ದರು. ಭಾರತದಲ್ಲಿರುವ ಚೀನಾ ಪತ್ರಕರ್ತರ ಸಂಖ್ಯೆ 14ರಿಂದ ಈಗ ಕೇವಲ ಒಂದಕ್ಕೆ ಇಳಿದಿದೆ ಎಂದಿದ್ದರು.

‘‘2017ರಲ್ಲಿ, ಭಾರತದಲ್ಲಿರುವ ಚೀನಾ ಪತ್ರಕರ್ತರ ವೀಸಾಗಳ ಸಿಂಧುತ್ವ ಅವಧಿಯನ್ನು ಭಾರತವು ಯಾವುದೇ ಸಕಾರಣವಿಲ್ಲದೆ ಮೂರು ತಿಂಗಳುಗಳಿಗೆ ಮತ್ತು ಕೆಲವು ಪ್ರಕರಣಗಳಲ್ಲಿ ಒಂದು ತಿಂಗಳಿಗೆ ಕಡಿತಗೊಳಿಸಿತು. 2020ರ ಬಳಿಕ, ಭಾರತದಲ್ಲಿ ನೆಲೆಸುವುದಕ್ಕಾಗಿ ಚೀನಾ ಪತ್ರಕರ್ತರು ಹಾಕಿರುವ ಅರ್ಜಿಗಳನ್ನು ಪರಿಶೀಲಿಸಲು ಮತ್ತು ಅನುಮೋದಿಸಲು ಭಾರತ ಸರಕಾರ ನಿರಾಕರಿಸಿದೆ’’ ಎಂದು ಮಾವೊ ಹೇಳಿದರು.

Similar News