ಮುಂದಿನ ಸಿಎಂ ಏಕನಾಥ ಶಿಂಧೆ ಎಂದು ಬಿಂಬಿಸಿ ಶಿವಸೇನೆ ಜಾಹೀರಾತು; ದೇವೇಂದ್ರ ಫಡ್ನವಿಸ್ ಗೆ ಮುಜುಗರ

Update: 2023-06-13 08:02 GMT

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಂಗಳವಾರ ಹಲವು ಪತ್ರಿಕೆಗಳಲ್ಲಿ "ಪಿಎಂ ಮೋದಿ ಫಾರ್ ಇಂಡಿಯಾ, ಏಕನಾಥ್ ಶಿಂಧೆ ಫಾರ್ ಮಹಾರಾಷ್ಟ್ರ" ಎಂಬ ಶೀರ್ಷಿಕೆಯ ಪೂರ್ಣ ಪುಟದ ಜಾಹೀರಾತನ್ನು ನೀಡಿದ್ದು, ಸಮೀಕ್ಷೆಯನ್ನು ಉಲ್ಲೇಖಿಸಿ  ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗಿಂತ ಶಿಂಧೆ ಅವರನ್ನುಮುಂದಿನ ಸಿಎಂ  ಹುದ್ದೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಈ ಜಾಹೀರಾತಿಗೆ ಪ್ರತಿಕ್ರಿಯಿಸಿರುವ  ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು   ಶಿಂಧೆ ಪಕ್ಷವನ್ನು "ನರೇಂದ್ರ ಮೋದಿ-ಅಮಿತ್ ಶಾ ಅವರ ಶಿವಸೇನೆ" ಎಂದು ಕರೆದಿದ್ದಾರೆ.

ಈ ಜಾಹೀರಾತಿನಲ್ಲಿ ಸೇನೆಯ ಬಿಲ್ಲು-ಬಾಣದ ಚಿಹ್ನೆ ಹಾಗೂ  ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿಂಧೆ ಅವರ ಚಿತ್ರಗಳಿವೆ.  ಆದರೆ ಇದು ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಯಾವುದೇ ಚಿತ್ರ ಅಥವಾ ಫೋಟೋವನ್ನು ಹೊಂದಿಲ್ಲ.

ಮಹಾರಾಷ್ಟ್ರದ   ಶೇ.26.1 ರಷ್ಟು ಜನರು ಏಕನಾಥ್ ಶಿಂಧೆ ಹಾಗೂ  ಶೇ.23.2 ರಷ್ಟು ಜನರು ದೇವೇಂದ್ರ ಫಡ್ನವೀಸ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

“ಇದು ಮೊದಲು ಬಾಳಾಸಾಹೇಬ್ ಅವರ ಶಿವಸೇನೆ ಆಗಿತ್ತು. ಆದರೆ ಜಾಹೀರಾತು ಎಲ್ಲವನ್ನೂ ಸ್ಪಷ್ಟಪಡಿಸಿದೆ. ಅದು ಈಗ ನರೇಂದ್ರ ಮೋದಿ-ಅಮಿತ್ ಶಾ ಅವರ ಶಿವಸೇನೆಯಾಗಿದೆ. ಜಾಹೀರಾತಿನಲ್ಲಿ ದಿವಂಗತ ಬಾಳಾಸಾಹೇಬ್ ಠಾಕ್ರೆಯವರ ಚಿತ್ರ ಅಥವಾ ಫೋಟೋ ಎಲ್ಲಿದೆ ?"  ಎಂದು ರಾವುತ್ ಪ್ರಶ್ನಿಸಿದರು.

ಮತದಾರರಿಗೆ ಯಾವ ಪಕ್ಷ ಅಥವಾ ನಾಯಕ ಹೆಚ್ಚು ಸ್ವೀಕಾರಾರ್ಹ ಎಂಬುದನ್ನು ಯಾವಾಗಲೂ ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ. ಏಕನಾಥ್ ಶಿಂಧೆ ಕ್ಯಾಬಿನೆಟ್ ಸಚಿವರಾಗಿ ಹಿಂದೆ ಜನಪ್ರಿಯರಾಗಿದ್ದರು ಮತ್ತು ಈಗ ಮುಖ್ಯಮಂತ್ರಿಯಾಗಿ ಅವರನ್ನು ಇಷ್ಟಪಡುವವರು ಹೆಚ್ಚಾಗಿದ್ದಾರೆ. ರಾಜ್ಯದ ಜನರು ಫಡ್ನವಿಸ್,  ಶಿಂಧೆ ಮತ್ತು ಪ್ರಧಾನಿ ಮೋದಿಯವರಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವನಕುಳೆ  ಅವರು ಜಾಹೀರಾತಿನಿಂದ ಉಂಟಾಗಿರುವ ಗೊಂದಲ ಸರಿಪಡಿಸಲು ಯತ್ನಿಸಿದ್ದಾರೆ.

ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಮುಖ್ಯ ವಕ್ತಾರ ಅತುಲ್ ಲೋಂಧೆ  ಇದನ್ನು "ಸುಳ್ಳು" ಸಮೀಕ್ಷೆ ಎಂದು ಕರೆದಿದ್ದು ಶಿಂಧೆ ಅವರು ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಇದನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

"ಚುನಾವಣೆ ಮುಗಿದ ನಂತರ  ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರದಲ್ಲಿ 42 ಕ್ಕೂ ಹೆಚ್ಚು ಲೋಕಸಭಾ ಮತ್ತು ವಿಧಾನಸಭೆಯಲ್ಲಿ 200 ಸ್ಥಾನಗಳನ್ನು ಗೆಲ್ಲುವುದು ಖಚಿತ. 'ಒಂದು ಕಾಲದಲ್ಲಿ  ಏಕನಾಥ್ ಶಿಂಧೆ ಇದ್ದರು' ಎನ್ನುವುದಾಗಿ ಅವರ (ಏಕನಾಥ್ ಶಿಂಧೆ) ಬಗ್ಗೆ ಹೊಸ ಕಥೆ ಬರೆಯಲಾಗುವುದು  ಎಂದು ಲೋಂಧೆ  ಹೇಳಿದರು.

Similar News