ಹೆಚ್ಚುತ್ತಿರುವ ನಿರುದ್ಯೋಗದ ನಡುವೆ 70,000 ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ

Update: 2023-06-13 16:41 GMT

ಹೊಸದಿಲ್ಲಿ: ಮಂಗಳವಾರ ವರ್ಚುವಲ್ ಆಗಿ ನಡೆದ ‘ರೋಜಗಾರ್ ಮೇಲಾ’ದಲ್ಲಿ ವಿವಿಧ ಸರಕಾರಿ ಉದ್ಯೋಗಗಳಿಗೆ ಆಯ್ಕೆಯಾದ 70,000ಕ್ಕೂ ಅಧಿಕ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಕೇತ್ರಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.

ತನ್ನ ಸರಕಾರವು ಅಭೂರ್ತಪೂರ್ವ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಿದೆ ಎಂದು ಹೇಳಿದ ಅವರು,ಎಸ್ಎಸ್ಸಿ,ಯುಪಿಎಸ್ಸಿ ಮತ್ತು ರೈಲ್ವೆಯಂತಹ ಸರಕಾರಿ ಉದ್ಯೋಗದ ಮುಖ್ಯ ಮೂಲಗಳು ಮೊದಲಿಗಿಂತಲೂ ಹೆಚ್ಚಿನ ಜನರನ್ನು ನೇಮಕ ಮಾಡಿಕೊಂಡಿವೆ ಎಂದು ತಿಳಿಸಿದರು.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಇತ್ತೀಚಿನ ವರದಿಯಂತೆ ಮೋದಿ ನೇತೃತ್ವದ ಸರಕಾರವು ಅಧಿಕಾರ ವಹಿಸಿಕೊಂಡ ಕೇವಲ ಮೂರು ವರ್ಷಗಳ ಬಳಿಕ 2017ರಲ್ಲಿ ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟವಾದ ಶೇ.6.1ನ್ನು ತಲುಪಿತ್ತು ಮತ್ತು ಪ್ರಸ್ತುತ 2023 ಎಪ್ರಿಲ್ನಲ್ಲಿ ಇದ್ದಂತೆ ಶೇ.8.11ಕ್ಕೆ ಏರಿದೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು. ಸರಕಾರಿ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿತ್ತು ಮತ್ತು ನ್ಯಾಯಾಲಯಗಳು ಮಧ್ಯ ಪ್ರವೇಶಿಸಿದರೆ ಐದು ವರ್ಷಗಳಿಗೂ ಹೆಚ್ಚು ಕಾಲ ಎಳೆಯಲ್ಪಡುತ್ತಿತ್ತು ಎಂದು ಹೇಳಿದ ಮೋದಿ,ಆದರೆ ಈಗ ನೇಮಕಾತಿ ಪ್ರಕ್ರಿಯೆಯು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳುತ್ತಿದೆ,ಅದೂ ಹೆಚ್ಚಿನ ಪಾರದರ್ಶಕತೆಯೊಂದಿಗೆ ಎಂದರು.
 
ಈ ನಡುವೆ ಸುದ್ದಿ ಜಾಲತಾಣ ‘ದಿ ವೈರ್ ’ನ ವರದಿಯಂತೆ ಎಸ್ಎಸ್ಸಿ ಜಿಡಿ 2018ರಡಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ಗಳಾಗಿ ನೇಮಕಗೊಂಡವರು 2022ರವರೆಗೂ ತಮ್ಮ ನೇಮಕಾತಿ ಪತ್ರಗಳನ್ನು ಸ್ವೀಕರಿಸಿರಲಿಲ್ಲ.ರೋಜಗಾರ್ ಮೇಲಾದಲ್ಲಿ ಮೋದಿಯವರ ಭಾಷಣವು ಕ್ರಮೇಣ ಉದ್ಯೋಗದಿಂದ ಆಡಳಿತ ವಿಷಯಗಳು ಹಾಗೂ ಕಳೆದ ಒಂಭತ್ತು ವರ್ಷಗಳಲ್ಲಿ ಅವರ ಸರಕಾರದ ಒಟ್ಟು ಸಾಧನೆಯತ್ತ ಹೊರಳಿತು.

ಭಾರತವು ಈಗ ಒಂದು ದಶಕದ ಹಿಂದೆ ಇದ್ದದ್ದಕ್ಕಿಂತ ಹೆಚ್ಚು ಸ್ಥಿರ,ಸುರಕ್ಷಿತ ಮತ್ತು ಪ್ರಬಲ ದೇಶವಾಗಿದೆ ಹಾಗೂ ನಿರ್ಣಾಯಕತೆಯು ಭಾರತೀಯ ಸರಕಾರದ ಗುರುತಾಗಿದೆ ಎಂದು ಹೇಳಿದ ಮೋದಿ,‘ನಮ್ಮ ಆರ್ಥಿಕತೆಗೆ ಹಿಂದೆಂದೂ ಇಂತಹ ವಿಶ್ವಾಸವಿರಲಿಲ್ಲ. ಜಾಗತಿಕ ಆರ್ಥಿಕ ಹಿಂಜರಿತಗಳು,ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ ಮೇಲೆ ರಶ್ಯಾದ ಆಕ್ರಮಣದಿಂದಾಗಿ ಪೂರೈಕೆ ಸರಪಳಿಯಲ್ಲಿ ಅಡ್ಡಿಗಳ ಹೊರತಾಗಿಯೂ ಭಾರತೀಯ ಆರ್ಥಿಕತೆಯು ಹೊಸ ಎತ್ತರವನ್ನೇರುವಲ್ಲಿ ಯಶಸ್ವಿಯಾಗಿದೆ ’ ಎಂದರು.

ಹಿಂದಿನ ಸರಕಾರಗಳು ರಾಜಕೀಯ ಭ್ರಷ್ಟಾಚಾರ,ಯೋಜನೆಗಳಲ್ಲಿ ಅವ್ಯವಹಾರಗಳು ಮತ್ತು ಸಾರ್ವಜನಿಕ ಹಣದ ದುರುಪಯೋಗಕ್ಕೆ ಕುಖ್ಯಾತವಾಗಿದ್ದವು ಎಂದು ಪ್ರತಿಪಾದಿಸಿದ ಮೋದಿ,ಇಂದು ಭಾರತವು ರಾಜಕೀಯ ಸ್ಥಿರತೆಗೆ ಹೆಸರಾಗಿದೆ,ಇದು ಜಾಗತಿಕವಾಗಿ ಬಹಳ ಅರ್ಥಪೂರ್ಣವಾಗಿದೆ ಮತ್ತು ಭಾರತ ಸರಕಾರವು ತನ್ನ ನಿರ್ಣಾಯಕತೆಗಾಗಿ ಗುರುತಿಸಲ್ಪಟ್ಟಿದೆ ಎಂದರು.

Similar News