ಮಧ್ಯಪ್ರದೇಶ: 400 ಕಾರುಗಳ ಬೆಂಗಾವಲು ಪಡೆಯಲ್ಲಿ ಕಾಂಗ್ರೆಸ್‌ಗೆ ವಾಪಸಾದ ಬಿಜೆಪಿ ನಾಯಕ

Update: 2023-06-15 08:31 GMT

ಭೋಪಾಲ್: ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್‌ಗೆ ಸುಮಾರು 300 ಕಿ.ಮೀ ದೂರ 400 ಕಾರುಗಳ ಬೆಂಗಾವಲು ಪಡೆಯೊಂದಿಗೆ  ಬಿಜೆಪಿ ನಾಯಕ ಕಾಂಗ್ರೆಸ್ ಗೆ ವಾಪಸಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ 2020 ರ ಬಂಡಾಯದ ಸಮಯದಲ್ಲಿ ಈ ನಾಯಕ ಕಾಂಗ್ರೆಸ್ ತ್ಯಜಿಸಿದ್ದ.

ಶಿವಪುರಿಯಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲ್ ನಾಥ್ ಸರಕಾರವನ್ನು ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಸಿಂಧಿಯಾ ಅವರೊಟ್ಟಿಗೆ  ಬಿಜೆಪಿಗೆ ಸೇರಿದ್ದರು. ಬಂಡಾಯದ ನೇತೃತ್ವ ವಹಿಸಿದ್ದ ಸಿಂಧಿಯಾ ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ.

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸಿಂಗ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಟಿಕೆಟ್  ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಹಾಗೂ  ದಿಗ್ವಿಜಯ ಸಿಂಗ್ ಅವರು ಬೈಜನಾಥ್ ಸಿಂಗ್ ರನ್ನು  ಪಕ್ಷಕ್ಕೆ ಮರಳಿ ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕಾಂಗ್ರೆಸ್‌ಗೆ ಸೇರಿದರು.

ತಮ್ಮ ಪಕ್ಷ ಬದಲಾವಣೆಯ ದ್ಯೋತಕವಾಗಿ ಬೈಜನಾಥ್ ಸಿಂಗ್ ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ 400-ಕಾರುಗಳೊಂದಿಗೆ  ಆಗಮಿಸಿದರು. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಓಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜನರು ವೀಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಕಾರುಗಳಿಗೆ ಕೈ ಬೀಸುವುದು ಕಂಡುಬರುತ್ತಿದೆ.

Similar News