ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ತಮ್ಮ ಹೆಸರುಗಳನ್ನು ಕೈಬಿಡುವಂತೆ ಆಗ್ರಹಿಸಿ NCERTಗೆ ಪತ್ರ ಬರೆದ 33 ವಿದ್ವಾಂಸರು

Update: 2023-06-15 10:42 GMT

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)  ಇದರ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯಲ್ಲಿ ವಿವಿಧ ಅವಧಿಗಳಲ್ಲಿದ್ದ 33 ವಿದ್ವಾಂಸರು ಮಂಡಳಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ತಮ್ಮ ಹೆಸರುಗಳನ್ನು ಅಳಿಸುವಂತೆ ಆಗ್ರಹಿಸಿ ಮಂಡಳಿಗೆ ಪತ್ರ ಬರೆದಿದ್ದಾರೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ಏಕಪಕ್ಷೀಯ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಈ ಪಠ್ಯಪುಸ್ತಕ ರಚನೆಗೆ ಕೊಡುಗೆ ನೀಡಿದ್ದ ವಿದ್ವಾಂಸರು ಮೇಲಿನಂತೆ ಬೇಡಿಕೆ ಇಟ್ಟಿದ್ದಾರೆ.

ವಿಭಿನ್ನ ನಿಲುವುಗಳನ್ನು ಹೊಂದಿದ್ದ ಹೊರತಾಗಿಯೂ  ರಾಜ್ಯಶಾಸ್ತ್ರದಲ್ಲಿ ಉತ್ತಮ ಪಠ್ಯಪುಸ್ತಕಗಳನ್ನು ಹೊರತರಲು ತಾವೆಲ್ಲರೂ ಜೊತೆಯಾಗಿ ಕೆಲಸ ಮಾಡಿದ್ದೆವು ಎಂದು ಈ ವಿದ್ವಾಂಸರು ಹೇಳಿದ್ದಾರೆ.  ಆದರೆ ಈ ಪಠ್ಯಪುಸ್ತಕಗಳಿಗೆ ಎನ್‌ಸಿಇಆರ್‌ಟಿ ಕೆಲ ಮಹತ್ತರ ಬದಲಾವಣೆಗಳನ್ನು ಮಾಡಿರುವುದರ ಜೊತೆಗೆ ಕೆಲವೊಂದು ಅಂಶಗಳನ್ನು ಅಳಿಸಿದೆ.

“ಯಾವುದು ಅಸ್ವೀಕಾರಾರ್ಹ ಮತ್ತು ಯಾವುದು ಅಪೇಕ್ಷಾರ್ಹ ಎಂದು ಯಾರು ನಿರ್ಧರಿಸುತ್ತಾರೆ ಎಂಬ ವಿಚಾರ ಅಸ್ಪಷ್ಟವಾಗಿದೆ. ಇದು ನಾವು ನಂಬಿಕೆಯಿರಿಸಿರುವ ಪಾರದರ್ಶಕತೆಯ ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ,” ಎಂದು ಈ ವಿದ್ವಾಂಸರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

“ಮೂಲ ಪಠ್ಯಪುಸ್ತಕಗಳಿಗೆ ಸಾಕಷ್ಟು ಪರಿಷ್ಕರಣೆಗಳನ್ನು ಮಾಡಿರುವುದರಿಂದ ಅವು ಈಗ ಬೇರೆಯೇ ಪುಸ್ತಕಗಳಾಗಿರುವುದರಿಂದ ನಾವು ರಚಿಸಿದ ಪುಸ್ತಕಗಳೆಂದು ಹೇಳಲು ಕಷ್ಟಕರವಾಗುತ್ತಿದೆ ಹಾಗೂ ಅವುಗಳೊಂದಿಗೆ ನಮ್ಮ ಹೆಸರು ಸಂಯೋಜಿತವಾಗಿರುವುದು ಸರಿಯಲ್ಲ,” ಎಂದು ಪತ್ರ ಹೇಳಿದೆ.

ಈ ಹಿಂದೆ ಯೋಗೇಂದ್ರ ಯಾದವ್‌ ಮತ್ತು ಸುಹಾಸ್‌ ಪಲ್ಸೀಕರ್‌ ಕೂಡ ಇಂತಹುದೇ ಬೇಡಿಕೆ ಇರಿಸಿದ್ದರಲ್ಲದೆ ಒಮ್ಮೆ ಹೆಮ್ಮೆಯ ಸಂಕೇತವಾಗಿದ್ದ ಈ ಪಠ್ಯಪುಸ್ತಕಗಳು ಈಗ ಮುಜುಗರ ಉಂಟು ಮಾಡುತ್ತವೆ ಎಂದು ಹೇಳಿದ್ದರು.

Similar News