ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಬಿಜೆಪಿ ನಾಯಕರ ನಿವಾಸಗಳ ಧ್ವಂಸಕ್ಕೆ ಯತ್ನ

ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ವಿಫಲಗೊಳಿಸಿದ ಆರ್ ಎ ಎಫ್

Update: 2023-06-17 06:48 GMT

ಗುವಾಹಟಿ: ಘರ್ಷಣೆ ಪೀಡಿತ ಮಣಿಪುರದ ಕ್ವಾಥಾ ಮತ್ತು ಕಾಂಗ್ವೈ ಪ್ರದೇಶಗಳಲ್ಲಿ  ನಿನ್ನೆ ರಾತ್ರಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಗಿದ್ದು, ಇಂದು ಬೆಳಗಿನ ಜಾವದವರೆಗೂ ನಿರಂತರ ಗುಂಡಿನ ದಾಳಿಗಳು ವರದಿಯಾಗುತ್ತಿವೆ. ಕೆಲವು ಬಿಜೆಪಿ ನಾಯಕರ ಮನೆಗೆ ದಾಳಿ ಮಾಡುವ ಪ್ರಯತ್ನವೂ ನಡೆದಿದೆ ಎಂದು ಪೊಲೀಸ್ ಮತ್ತು ಸೇನಾ ಮೂಲಗಳು ತಿಳಿಸಿವೆ.

ಗುಂಪು ಸೇರುವುದು, ವಿಧ್ವಂಸಕ ಮತ್ತು ಬೆಂಕಿ ಹಚ್ಚುವ ಪ್ರಯತ್ನದ ಅನೇಕ ಘಟನೆಗಳು ವರದಿಯಾಗಿವೆ.

ಸೇನೆ, ಅಸ್ಸಾಂ ರೈಫಲ್ಸ್, ರ್ಯಾಪಿಡ್ ಆಕ್ಷನ್ ಫೋರ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆಯನ್ನು ಕೈಗೊಂಡವು.

ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ. ಸುಮಾರು 1,000 ಜನರ ಗುಂಪು ನಿನ್ನೆ ಸಂಜೆ ಒಟ್ಟುಗೂಡಿತು ಮತ್ತು ಬೆಂಕಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿತು. ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿತು, ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡರು.

ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪು ಸೇರಿದೆ ಎಂದು ವರದಿಯಾಗಿದೆ. ರಾತ್ರಿ 10.40ಕ್ಕೆ ತೊಂಗ್ಜು ಬಳಿ ಜಮಾಯಿಸಿದ 200ರಿಂದ 300 ಮಂದಿ,  ಸ್ಥಳೀಯ ಶಾಸಕರ ನಿವಾಸವನ್ನು ಧ್ವಂಸಗೊಳಿಸಲು ಯತ್ನಿಸಿದರು. RAF  ಈ ಗುಂಪನ್ನು ಚದುರಿಸಿತು.

ಮಧ್ಯರಾತ್ರಿ ಇಂಫಾಲ್ ವೆಸ್ಟ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ ಅವರ ನಿವಾಸವನ್ನು  ಧ್ವಂಸ ಮಾಡಲು ಗುಂಪು ಪ್ರಯತ್ನಿಸಿತು, ಆದರೆ ಅದನ್ನು ಸೇನೆ ಮತ್ತು ಆರ್‌ಎಎಫ್ ಇದನ್ನು ವಿಫಲಗೊಳಿಸಿತು.

ಪೊಲೀಸ್ ಠಾಣೆಗೆ ನುಗ್ಗಲು ಯತ್ನ: 

ನಿನ್ನೆ ರಾತ್ರಿ ಮತ್ತೊಂದು ಗುಂಪು ಇಂಫಾಲ್ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ ಪೊಲೀಸ್ ಠಾಣೆಯ ಶಸ್ತ್ರಾಗಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ರಾತ್ರಿ 11.40ರ ವೇಳೆಗೆ 300ರಿಂದ 400 ಮಂದಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು. ಆರ್‌ಎಎಫ್‌  ಗುಂಪನ್ನು ಚದುರಿಸಿದೆ

Similar News