ಗುಜರಾತ್| ಅತಿಕ್ರಮಣ ವಿರೋಧಿ ಕಾರ್ಯಾಚರಣೆ: ಹಿಂಸಾತ್ಮಕ ಪ್ರತಿಭಟನೆ, ಓರ್ವ ಸಾವು

Update: 2023-06-17 06:51 GMT

ಹೊಸದಿಲ್ಲಿ: ಗುಜರಾತಿನ ಜುನಾಗಢದಲ್ಲಿ ಶುಕ್ರವಾರ ರಾತ್ರಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ವೇಳೆ ನಡೆದ ಹಿಂಸಾಚಾರದಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ.

ಪ್ರತಿಭಟನಾ ನಿರತ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತು, ನಂತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು.

ಮಜೆವಾಡಿ ಗೇಟ್ ಬಳಿ ಇರುವ ಮಸೀದಿಗೆ 5 ದಿನಗಳೊಳಗೆ ದಾಖಲೆಗಳನ್ನು ನೀಡುವಂತೆ ಜುನಾಗಢ ನಗರಸಭೆಯಿಂದ ನೋಟಿಸ್ ನೀಡಲಾಗಿದೆ ಎಂದು ಜುನಾಗಢ ಎಸ್ಪಿ ರವಿತೇಜ ವಾಸಮಶೆಟ್ಟಿ ಹೇಳಿದ್ದಾರೆ.

"ನಿನ್ನೆ ಸುಮಾರು 500-600 ಜನರು ಅಲ್ಲಿ ಜಮಾಯಿಸಿದ್ದರು. ಪೊಲೀಸರು ರಸ್ತೆ ತಡೆ ಮಾಡದಂತೆ ಮನವೊಲಿಸಿದರು. ರಾತ್ರಿ 10.15 ರ ಸುಮಾರಿಗೆ ಕಲ್ಲು ತೂರಾಟ ನಡೆಯಿತು ಮತ್ತು ಜನರು ಪೊಲೀಸರ ಮೇಲೆ ದಾಳಿ ಮಾಡಲು ಬಂದರು. ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದರು. ಈ ಘಟನೆಯಲ್ಲಿ ಪೊಲೀಸರು ಗಾಯಗೊಂಡಿದ್ದಾರೆ. 174 ಜನರನ್ನು ಬಂಧಿಸಲಾಗಿದೆ" ಎಂದು ಜುನಾಗಢ ಎಸ್ಪಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕಲ್ಲು ತೂರಾಟದಿಂದಾಗಿ ನಾಗರಿಕರೊಬ್ಬರು ಸಾವನ್ನಪ್ಪಿದ್ದಾರೆ ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರ ಅದು ಸ್ಪಷ್ಟವಾಗಲಿದೆ ಎಂದು ಎಸ್ಪಿ ಹೇಳಿದರು.

Similar News