'ಆದಿಪುರುಷ್' ಚಿತ್ರದ ವಿರುದ್ಧ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿಂದೂ ಸೇನಾ

Update: 2023-06-17 08:22 GMT

ಹೊಸ ದಿಲ್ಲಿ: 'ಆದಿಪುರುಷ್' ಚಲನಚಿತ್ರದ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಸೇನಾ ಎಂಬ ಸಂಘಟನೆಯು ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ ಎಂದು timesofindia. com ವರದಿ ಮಾಡಿದೆ.

'ಆದಿಪುರುಷ್' ಚಲನಚಿತ್ರದ ವಿರುದ್ಧ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಎಂಬುವವರು ಶುಕ್ರವಾರ ದಿಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, "ಭಾರತದ ಸಂವಿಧಾನದ ವಿಧಿ 226ರ ಅಡಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದ ರಿಟ್ ಅರ್ಜಿ ಇದಾಗಿದ್ದು, ಧಾರ್ಮಿಕ ನಾಯಕರು, ಪಾತ್ರಗಳು ಹಾಗೂ ವ್ಯಕ್ತಿಗಳನ್ನು ಕೀಳು ಅಭಿರುಚಿಯಿಂದ ಚಿತ್ರಿಸಿರುವ ಪ್ರತಿವಾದಿಗಳಿಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಕ್ತ ನಿರ್ದೇಶನ ನೀಡಬೇಕು ಹಾಗೂ 'ಆದಿಪುರುಷ್' ಚಲನಚಿತ್ರದ ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣಪತ್ರ ನೀಡಬಾರದು ಎಂದು ಪ್ರತಿವಾದಿಗಳಿಗೆ ಕಡ್ಡಾಯ ನಿರ್ದೇಶನ ನೀಡಬೇಕು ಮತ್ತು ಪ್ರಕರಣದ ವಾಸ್ತವಾಂಶ ಹಾಗೂ ಸನ್ನಿವೇಶಗಳನ್ನು ಪರಿಗಣನೆಗೆ ತೆಗೆದುಕೊಂಡು ನ್ಯಾಯಾಲಯವು ತನಗೆ ಸರಿ ಮತ್ತು ಸೂಕ್ತವೆನಿಸಿದ ಇನ್ನಾವುದೇ ಆದೇಶವನ್ನು ಜಾರಿಗೊಳಿಸಬೇಕು" ಎಂದು ಅರ್ಜಿದಾರ ವಿಷ್ಣು ಗುಪ್ತಾ ಮನವಿ ಮಾಡಿದ್ದಾರೆ.

"ಧಾರ್ಮಿಕ ನಾಯಕರು, ಪಾತ್ರಗಳು ಹಾಗೂ ವ್ಯಕ್ತಿಗಳನ್ನು ಅಸಮರ್ಪಕ ಹಾಗೂ ಅಸಂಬದ್ಧವಾಗಿ ಚಿತ್ರಿಸುವ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ" ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.

'ಆದಿಪುರುಷ್' ಚಲನಚಿತ್ರದಲ್ಲಿ ಚಿತ್ರಿಸಲಾಗಿರುವ ರಾವಣ, ರಾಮ, ಸೀತೆ ಹಾಗೂ ಹನುಮಾನ್ ಪಾತ್ರದ ವ್ಯಕ್ತಿತ್ವಗಳು ಮಹರ್ಷಿ ವಾಲ್ಮೀಕಿಯವರ ರಾಮಾಯಣ ಹಾಗೂ ತುಳಸಿದಾಸ್ ಅವರ ರಾಮಚರಿತಮಾನಸ ಕೃತಿಗಳಲ್ಲಿನ ಧಾರ್ಮಿಕ ನಾಯಕರು, ಪಾತ್ರಗಳು ಹಾಗೂ ವ್ಯಕ್ತಿಗಳ ಪಾತ್ರಗಳಿಗಿಂತ ವ್ಯತಿರಿಕ್ತವಾಗಿವೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಹಿಂದೂಗಳ ಪುರಾಣ ಕಾವ್ಯವಾದ ರಾಮಾಯಣವನ್ನು ಆಧರಿಸಿ ನಿರ್ಮಿಸಲಾಗಿರುವ 'ಆದಿಪುರುಷ್' ಚಿತ್ರವನ್ನು ಓಂ ರಾವತ್ ನಿರ್ದೇಶಿಸಿದ್ದು, ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ರಾಮನ ಪಾತ್ರದಲ್ಲಿ ತಾರಾ ನಟ ಪ್ರಭಾಸ್, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಹಾಗೂ ಲಕ್ಷ್ಮಣ ಪಾತ್ರದಲ್ಲಿ ಸನ್ನಿ ಸಿಂಗ್ ಅಭಿನಯಿಸಿದ್ದು, ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ನಟಿಸಿದ್ದಾರೆ.

Similar News